ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ.
ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು ದಶಕಗಳಲ್ಲಿ ನಾವು ವಿಶ್ವ ಪರಿಸರ ದಿನ ಎಂದು ಜಪಿಸಿದ್ದು ಬಿಟ್ಟರೆ ಬೇರೇನು ಸಾಸಿದ್ದೇವೆ?! ಚಿಂತನೆಗಿದು ಸಕಾಲ.
ಏನಿದು ವಿಶ್ವ ಪರಿಸರ ದಿನ?
1972ರ ಜೂನ್ 5 ರಂದು ಮಾನವ ಪರಿಸರಕ್ಕೆ ಸಂಬಂಸಿದಂತೆ ವಿಶ್ವಸಂಸ್ಥೆಯ ಅಧಿವೇಶನ ನಡೆಯಿತು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ನೈಸರ್ಗಿಕ ವಿಪತ್ತುಗಳು, ಪರಿಸರ ನಿರ್ವಹಣೆ, ಸಂಪನ್ಮೂಲ ಕ್ಷಮತೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಗಂಭೀರತೆಯನ್ನು ಮನಗಂಡು ನಿವಾರಣೆಗೆ ಮಾರ್ಗೋಪಾಯ ಹುಡುಕುವ ನಿಟ್ಟಿನಲ್ಲಿ ಈ ಬಗ್ಗೆ ಒಂದು ದಿನವನ್ನು ಮೀಸಲಿರಿಸುವ ಪ್ರಸ್ತಾಪವಾಯಿತು. ಅದರ ಫಲವೇ 1973ರಲ್ಲಿ ಮೊದಲ ವಿಶ್ವ ಪರಿಸರ ದಿನ ಆಚರಣೆ, ತದನಂತರ ಜೂನ್ 5 ವಿಶ್ವ ಪರಿಸರ ದಿನವಾಗಿ ಆಚರಿಸಲ್ಪಡುತ್ತಿದೆ. ಹಾಗಂತ ಇದು ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು.
ಪ್ರಕೃತಿಯ ಬೆತ್ತಲು
ಜೀವಿಗಳ ರಕ್ಷಣೆ, ಪಾಲನೆ, ಪೋಷಣೆಗೆ ತನ್ನದೆಲ್ಲವನ್ನೂ ಮುಕ್ತವಾಗಿ ನೀಡಿದ ಪರಿಸರ ಇಂದು ಬೆತ್ತಲಾಗಿದೆ. ತನ್ನೊಡಲಲ್ಲಿ ಬೇಗುದಿಯನ್ನು ಇಟ್ಟುಕೊಂಡರೂ ತಣ್ಣನೆಯಾಗಿ ನಮ್ಮನ್ನು ಸಲಹಿದ ಪರಿಣಾಮವಾಗಿ ಇಂದು ಅದಕ್ಕೇ ನೆಲೆಯಿಲ್ಲದಂತಾಗಿದೆ. ಅಷ್ಟೇ ಅಲ್ಲ, ಅದರ ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸರ, ಭೂಮಿಯನ್ನು ಜೀವಂತವಾಗಿರಿಸುವುದು ಹಸಿರು ಸಸ್ಯಗಳು. ಆದರೆ ಇಂದು ಭೂಮಿಗೆ ಬಿದ್ದ ಬೀಜವೊಂದು ಮೊಳೆತು ಮೇಲೇಳಲು, ಆ ಬಳಿಕ ಜೀವಂತವಿರಲು ಹೋರಾಟವನ್ನೇ ಮಾಡಬೇಕಿದೆ. ಕಾರಣವೇನೆಂದು ಕೇಳಿದರೆ ತೋರುಬೆರಳು ಮನುಷ್ಯನ ಕಡೆಗೆ ತಿರುಗುತ್ತದೆ. ಪರಿಸರದಿಂದ ಎಲ್ಲವನ್ನು ಪಡೆದುಕೊಳ್ಳುವ ಆತ ಕೃತಜ್ಞನಾಗುವುದು ಬಿಟ್ಟು, ಅದರ ನಾಶಕ್ಕೇ ಮುಂದಾಗುತ್ತಿದ್ದಾನೆ. ಆ ಮೂಲಕ ಪರಿಸರ ಅಸಮತೋಲನಕ್ಕೆ ಕಾರಣನಾಗಿದ್ದಾನೆ.
ಪರಿಸರದ ಉತ್ತರ
ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಏರುತ್ತಿರುವ ವಾಯು, ಜಲ, ನೆಲ ಮಾಲಿನ್ಯ, ಕುಸಿಯುತ್ತಿರುವ ಅಂತರ್ಜಲ, ಅಶುದ್ಧ ನೀರು, ಗಾಳಿ, ಆಹಾರ ಪದಾರ್ಥಗಳು ಇಂದು ಪ್ರತಿಯೊಂದು ದೇಶವನ್ನು ಚಿಂತೆಗೀಡು ಮಾಡಿದೆ. ಮಾನವ ಕೈಯಾರೆ ತನ್ನ ನೆಲೆಯನ್ನು ತಾನೇ ನಾಶಮಾಡಿಕೊಳ್ಳುತ್ತಿದ್ದಾನೆ. ಅತಿಯಾದ ಕೈಗಾರೀಕರಣ, ನಗರೀಕರಣದ ಜೊತೆಗೆ ಅತಿಯಾದ ಸ್ವಾರ್ಥ ಹಾಗೂ ಪರಿಸರದ ಬಗ್ಗೆ ತಳೆದಿರುವ ನಕಾರಾತ್ಮಕ ಧೋರಣೆಗೆ ಪ್ರಕೃತಿಯೂ ಅತಿವಷ್ಠಿ, ಅನಾವಷ್ಠಿ, ಪ್ರಾಕೃತಿಕ ವಿಕೋಪಗಳು, ಸಾವು ನೋವು... ಮೂಲಕ ತನ್ನದೇ ಆದ ಉತ್ತರ ನೀಡುತ್ತಿದೆ. ನೈಸರ್ಗಿಕ ವಿಕೋಪಗಳು ಇಂದು ಪ್ರಪಂಚಾದ್ಯಂತ ಎಲ್ಲಾ ದೇಶಗಳನ್ನು ಬಡಿದೆಬ್ಬಿಸಿವೆ.
ಜನಸಾಮಾನ್ಯರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಪ್ರಯತ್ನ ಇಂದು ತುರ್ತಾಗಿ ನಡೆಯಬೇಕಿದೆ. ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ನಮ್ಮ ಪರಿಸರದ ಪುನರುತ್ಥಾನಕ್ಕೆ ನಾವು ಏನು ಮಾಡಬೇಕೆಂಬುದರ ಬಗ್ಗೆ ಚಿಂತನ ಮಂಥನ ನಡೆಸಿ ಸರಿದಾರಿಯಲ್ಲಿ ಪರಿಸರ ಸಂರಕ್ಷಿಸುವ ಕಾರ್ಯ ಈ ಕ್ಷಣದ ಅವಶ್ಯಕತೆಯಾಗಿದೆ.
ಪರಿಸರದ ಅವಿಭಾಜ್ಯ ಅಂಗ ಎನಿಸಿಕೊಂಡಿರುವ ಕಾಡು ನಮ್ಮ ಸ್ವಾರ್ಥಕ್ಕೆ ತುತ್ತಾಗಿ ಬರಡಾಗಿದೆ. ನಮ್ಮ ಬದುಕಿಗೆ, ಉಸಿರಿಗೆ ಅನಿವಾರ್ಯವಾದ ಕಾಡನ್ನು ನಾಶ ಮಾಡುತ್ತಿದ್ದೇವೆ. ಹಚ್ಚ ಹಸಿರು ಕಾನನ ಬದಲಾಗಿ ಇಂದು ಎಲ್ಲೆಡೆ ಕಾಂಕ್ರಿಟ್ ಕಾಡುಗಳೇ ನಮ್ಮ ಕಣ್ಣ ಮುಂದಿವೆ. ಭೂಮಿಯಲ್ಲಿರುವ ಸ್ವಾಭಾವಿಕಗಳೆಲ್ಲವೂ ಮಾಯವಾಗಿ ಅಸ್ವಾಭಾವಿಕಗಳೇ ತುಂಬಿಕೊಂಡಿವೆ. ಕೃತಕತೆಯ ನಾಗಾಲೋಟದಲ್ಲಿ ದಿನ ದಿನವೂ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಒಟ್ಟಿನಲ್ಲಿ ಬುದ್ಧಿ ಜೀವಿ ಎನ್ನುವ ನಾವುಗಳು ಪ್ರಕೃತಿಗೇ ಸವಾಲೆಸೆಯುತ್ತಿದ್ದೇವೆ. ಆದರೆ ಈ ಯುದ್ಧದಲ್ಲಿ ತಾತ್ಕಾಕಲಿವಾಗಿ ಪರಿಸರ ಮಣಿದರೂ ಇದಕ್ಕೆ ಬೆಲೆ ತೆರಬೇಕಾದವರೂ ನಾವೇ.
ಕಾಳಜಿ ಬೇಕು
ಆದ್ದರಿಂದ ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕು. ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ. ಹಿತಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಅಂತರ್ಜಲದ ವದ್ಧಿಗೆ ಯೋಜನೆಗಳನ್ನು ರೂಪಿಸಿ, ನೀರಿನ ಮೂಲಗಳಾದ ಕೆರೆ, ಬಾವಿ, ಕೊಳ, ನದಿ ಇತ್ಯಾದಿಗಳ ಮಾಲಿನ್ಯವನ್ನು ತಡೆಯಬೇಕು. ಮತ್ತೆ ಕಾಡನ್ನು ಬೆಳೆಸುವತ್ತ ಗಮನ ಹರಿಸಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಬೇಕು. ಪವನ ಶಕ್ತಿ, ಸೌರಶಕ್ತಿ ಮೊದಲಾದ ನೈಸರ್ಕಿಕ ಶಕ್ತಿಯ ಮೂಲಗಳಿಂದ ವಿದ್ಯುಚ್ಛಕ್ತಿ ತಯಾರಿಸಿ ಉಪಯೋಗಿಸಬೇಕು. ಜೈವಿಕ ಗೊಬ್ಬರಗಳನ್ನೇ ಬಳಸಬೇಕು. ಪರಿಸರಕ್ಕೆ ಹಾನಿ ಮಾಡುವ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು. ಜನ ಸಾಮಾನ್ಯರಲ್ಲಿ ಪರಿಸರದ ಕಾಳಜಿಯ ಬಗ್ಗೆ ಅರಿವು ಮೂಡಿಸಿ ನಾವೂ ಅದರಂತೆ ನಡೆಯಬೇಕು. ಇನ್ನಾದರೂ ಎಚ್ಚೆತ್ತು, ಪರಿಸರದ ಮೇಲೆಸಗುವ ಅನೈತಿಕ ಕಾರ್ಯಗಳಿಗೆ ಮಂಗಳಹಾಡಬೇಕು. ಪರಿಸರ ಸ್ನೇಹಿಯಾಗಿ ಬಾಳಬೇಕು.ವಿಶ್ವ ಪರಿಸರ ದಿನಾಚರಣೆ ಎಂದರೆ ಎಂದಿನಂತೆ ಇಂದು ಒಂದು ದಿನ ಅಂದುಕೊಂಡೇ ನಾವು ಇಷ್ಟು ವರ್ಷ ಕಳೆದಿದ್ದೇವೆ. ಹೆಚ್ಚೆಂದರೆ ಗಿಡ ನೆಡಬೇಕು, ಪರಿಸರ ಕಾಪಾಡಬೇಕು ಅಂತ ಒಂದೆರಡು ಮಾತಾಡಿ ಸುಮ್ಮನಾಗಿ ಬಿಡುತ್ತೇವೆ. ಆದರೆ ಇವತ್ತು ವಿಶ್ವ ಪರಿಸರ ದಿನ ಮಾತ್ರವಲ್ಲ, ಪ್ರಕೃತಿಯೂ ನಮ್ಮಿಂದ ತುಂಬ ಪ್ರಾಮಾಣಿಕವಾದ ಬದ್ಧತೆಯನ್ನು ಬೇಡುತ್ತಿದೆ. ಅದನ್ನು ಪೂರೈಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.