ಜುಲೈ 11, 2011

ನಿಮ್ಮೆದೆಗಪ್ಪಿ ಪ್ರೀತಿ ಮಾತು ಕೇಳಿಸೆಯಾ

ಜೀವದ ಗೆಳೆಯಾ,
ಯಾಕೋ ಗೊತ್ತಿಲ್ಲ ಗೆಳೆಯಾ ನಮ್ಮಿಬ್ಬರ ನಡುವೆ ಪ್ರೀತಿ ಹೆಚ್ಚಾಗಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಪ್ಪಾಗಿ ತಿಳಿದುಕೊಳ್ಳುತ್ತಿದ್ದೇವೆ ಅಂತ ಅನಿಸ್ತಾ ಇದೆ. ನಿಮ್ಮ ಜೊತೆ ಕೀಟ್ಲೆ ಮಾಡ್ಬೇಕು, ತರ್ಲೆ ಮಾಡ್ಬೇಕು ಅಂತ ಇಷ್ಟ ಪಟ್ಟು ಕೆಲವೊಮ್ಮೆ ಕೋತಿ ಚೇಷ್ಟೆ ಮಾಡ್ತೀನಿ. ಆದರೆ ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತೆ ಅನ್ನೋ ಸುಳಿವೂ ನಂಗೆ ಸಿಗೋದಿಲ್ಲ. ಮತ್ತೆ ಇಬ್ಬರೂ ನೊಂದುಕೊಂಡು ದಿನವನ್ನು ಬೇಸರದಲ್ಲಿ ಆರಂಭಿಸುತ್ತೇವೆ ಇಲ್ಲಾ ಮುಗಿಸುತ್ತೇವೆ. ಕಳೆದೆರಡು ವಾರದಿಂದ ನಮ್ಮ ದಿನಚರಿಯೇ ಇದಾಗಿ ಬಿಟ್ಟಿದೆ ಅಲ್ಲಾ? ನಂತರ ಭಾವುಕತೆಯ ಒಂದು ಪುಟ್ಟ ಮೆಸೇಜ್ ಇಬ್ಬರ ಮನದಲ್ಲಿದ್ದ ಬೇಸರ ದುಗುಡವನ್ನು ದೂರಗೊಳಿಸುತ್ತದೆ. ಯಾವುದೋ ಒತ್ತಡದಲ್ಲಿ ಮೊಬೈಲ್ ಪಕ್ಕದಲ್ಲಿ ಎಸೆದು ತಲೆ ಟೇಬಲ್‌ಗೆ ಒರಗಿಸಿ ಕುಳಿತಿದ್ದಾಗ ಮೊಬೈಲ್ ಸ್ಕ್ರೀನ್ ಮೇಲೆ ಬೆಳಕೊಂದು ಮೂಡಿತು. ನನಗೆ ಗೊತ್ತೇ ಇತ್ತು ಗೆಳೆಯ ಅದು ನಿಮ್ಮಿಂದ
ಬಂದಿರೋ ಮೆಸೇಜ್ ಅಂತ. ಹಾಗೆ ಅದನ್ನು ತೆರೆದಾಗ ನನ್ನ ದಡ್ಡತನಕ್ಕೆ ನಾನು ಮರುಗಿದೆ. “ಹೃದಯಂತರಾಳದ ಒಂದೇ ಒಂದು ಮಾತಿಗಾಗಿ ಜೀವ ಕಾಯುತ್ತಿದೆ. ನಿನ್ನ ಕೆಲಸ, ಸಮಸ್ಯೆ, ಕಷ್ಟ ಏನೂಂತ ಗೊತ್ತಿಲ್ಲ. ಆದ್ರೂ ಅರ್ಧ ನಿಮಿಷ, ಹೋಗ್ಲಿ ಒಂದು ಸಾಲಿನ ಮೆಸೇಜ್. ಪ್ಲೀಸ್ ನಿನ್ನ ಗೆಳೆಯನ ಎದೆ ಭಾರ ತಗ್ಗಿಸ್ತೀಯಾ?” ಎಂದು ಅದರಲ್ಲಿ ನೀವು ಕೇಳಿದಾಗ ನನಗೆ ಏನು ಮಾಡಬೇಕು ಅಂತ ತೋಚದೆ ನನಗರಿವಿಲ್ಲದಂತೆ ನಿಮ್ಮ ನಂಬರ್‌ಗೆ ಕರೆ ಹೋಗಿತ್ತು.
ನಿಮ್ಮ ಎಲ್ಲಾ ಭಾವನೆಗಳಿಗೂ ಬೆಲೆ ಕೊಡ್ತೀನಿ ಗೆಳೆಯಾ. ಕನಸಲ್ಲೂ ನಿಮ್ಮಿಂದ ದೂರ ಆಗಲ್ಲ.ಅದು ನನ್ನಿಂದ ಸಾಧ್ಯವೂ ಇಲ್ಲ. ನನ್ನ ಬಾಳಿನ ಜ್ಯೋತಿ ಪ್ರಕಾಶಮಾನವಾಗಿ ಬೆಳಗಬೇಕಾದರೆ ನೀವು ನನ್ನೊಂದಿಗೇ ಇರಬೇಕು. ಅದೇ ಜ್ಯೋತಿಯ ಬೆಳಕು ನನ್ನ ಬಾಳಿನ ಮುಂದಿನ ದಾರಿ ತೋರಬೇಕು ಎನ್ನುವುದೇ ನನ್ನ ಬಯಕೆ.
ಡಾರ್ಲಿಂಗ್ ಎವ್ರೀ ಬ್ರೀತ್ ಯು ಟೇಕ್.. 
ಎವ್ರೀ ಮೂವ್ ಯು ಮೇಕ್.. 
ವಿಲ್ ಬಿ ದೇರ್ ವಿತ್ ಯು,
ವಾಟ್ ವುಡ್ ಐ ಡು ವಿತ್‌ಔಟ್ ಯು? 
ವಾಂಟ್ ಟು ಲವ್ ಯು ಫಾರ್ ಎವರ್ ಆಂಡ್ ಎವರ್ ಆಂಡ್ ಎವರ್...
ನಿಮ್ಮ ಪ್ರತೀ ಮಾತು ನನ್ನ ಬದುಕಿಗೆ ಒಂದು ಅರ್ಥ ಕೊಡುತ್ತದೆ. ಒಂದೆರಡು ನಿಮಿಷ ಎಂದು ಪ್ರಾರಂಭವಾದ ಮಾತು ಗಂಟೆಗಟ್ಟಲೆ ಮುಂದುವರಿದರೂ ಒಂಚೂರು ಬೇಸರವಾಗೋಲ್ಲ. ಫೋನ್ ಕಾಲ್ ಕಟ್ ಆಗುತ್ತೆ ಎಂದಾಗ ಮಾತ್ರ ಮನ ಮತ್ತೆ ಶೂನ್ಯದತ್ತ ಹೊರಳುತ್ತೆ. ಆದರೆ ಸವಿ ನೆನಪು ಶಾಶ್ವತ ಅನ್ನೋ ನೀವು ಹೇಳಿಕೊಟ್ಟ ಆ ಮಂತ್ರವನ್ನು ಜಪಿಸಿ ಆ ನೋವನ್ನು ಮರೆಯುತ್ತೇನೆ. ಯಾಕೋ ಗೊತ್ತಿಲ್ಲ, ನೀವು ಜೊತೆಗಿರಬೇಕು ಅಂತ ಮನಸ್ಸು ತುಂಬಾನೆ ಹಂಬಲಿಸುತ್ತಿದೆ. ನಿಮ್ ಎದೆಗೆ ಒರಗಿ ಪ್ರೀತಿಯ ಮಾತುಗಳನ್ನ ಕೇಳ್ಬೇಕು ಗೆಳೆಯಾ. ನನ್ನ ನಿಮ್ಮೆದೆಗಪ್ಪಿ ಪ್ರೀತಿಯಿಂದ ಕಣ್ಣರೆಪ್ಪೆಗೊಂದು ಮುತ್ತು ಕೊಡುವಿರಾ. ಆ ಸವಿ ನೆನಪೇ ನನಗೆ ಶಾಶ್ವತ.
ನಿಮ್ಮೊಳಗೊಬ್ಬಳು
ಮುದ್ದು ಗೆಳತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ