ಮಾರ್ಚ್ 20, 2011

ಉತ್ತರ ಸಿಗದ ಅದೇ ಪ್ರಶ್ನೆ

ಪ್ರಿಯ ಗೆಳೆಯಾ,
ದಿನದ ಒಂದಿಷ್ಟು ಬಿಡುವಿನಲ್ಲಿ ನಿಮ್ಮ ಪ್ರೀತಿ ನೆನಪುಗಳೇ ಮನದೊಳಗೆ ಸುಳಿದಾಡುತ್ತವೆ. ನನ್ನ ಇಪ್ಪತ್ತು ವರುಷಗಳ ಜೀವನ ಪಯಣದಲ್ಲಿಯಾರೂ ಇಷ್ಟು ಆತ್ಮೀಯತೆ, ಪ್ರೀತಿ, ಅಕ್ಕರೆ ತೋರಿಸಿದ್ದಿಲ್ಲ. ಅದ್ಯಾಕೆಈ ಬಡವಿ ನಿಮ್ಮನ್ನ ಇಷ್ಟೊಂದು ಹಚ್ಚಿಕೊಂಡಳು? ಪ್ರಶ್ನೆ ಇನ್ನೂ ಪ್ರಶ್ನೆಯಾಗೇ ಉಳಿದಿದೆ.

ನನಗೆ ಗೊತ್ತು ನೀವು ಕುಂದಾಪುರದಿಂದ ಅವಳಿ ನಗರಕ್ಕೆ ಹೋಗೋ ರಸ್ತೆಯನ್ನು ಜೀವಮಾನದಲ್ಲಿ ಮರೆಯುವುದಿಲ್ಲ. ಅದೇ ರಸ್ತೆಯಲ್ಲಿ ಪಯಣಿಸುವಾಗ ಅಲ್ಲವೆ ನಮ್ಮ ಈ ಸಂಬಂಧ ವಜ್ರ ಸಿಮೆಂಟ್ ನಂತೆ ಗಟ್ಟಿಯಾಗಿದ್ದು. ನನಗೂ ತಿಂಗಳೊಳಗೆ ಮರೆತು ಹೋಗಿದೆ, ನಾನು ಆವತ್ತು ಏನು ಹೇಳಿದ್ದೆ? ಎಷ್ಟು ಜ್ಞಾಪಿಸಿದರೂ ನೆನಪಾಗುತ್ತಿಲ್ಲ. ವಸಂತದಲ್ಲಿ ಮಳೆ ಬರುವ ಹಾಗೇ ನೆನಪನ್ನು ಒಂದೊಂದಾಗೇ ನನಗೆ ಧಾರೆ ಎರೆಯುತ್ತಿದ್ದೀರಿ. "ಯಾವುದೇ ಕಾರಣಕ್ಕೂ ನಿನ್ನ ಮಾತು ನಿಲ್ಲಿಸ ಬೇಡ ಎಂದು ನನ್ನ ಬಳಿ ಬಂದು ನೀವು ಹೇಳಿದಾಗ, ನಾನೇ ನಿಮಗೊಂದು ಪ್ರಶ್ನೆ ಕೇಳಿದ್ದೆ . ಯಾಕೆ ನನ್ನ ಇಷ್ಟೊಂದು ಹಚ್ಚಿಕೊಂಡಿದ್ದೀರಿ? ನಂತರ ನನ್ನ ಉಗುರು ತೋರಿಸಿ ನಾನು ಹೇಳಿದ್ದೆ, ನಾ ನಿಮ್ಮೆದುರು ಇಷ್ಟೇ.
ತುಮ್ ಸೆ ಮಿಲ್ ನಾ
ಬಾತ್ ಕರ್ ನಾ 
ಬಡಾ ಅಚ್ಚಾ ಲಗ್ ತಾ ಹೇ
ಈ ರೀತಿ ನನಗನಿಸಿದ್ದು ನಿಮ್ಮ ಜೊತೆಗಿನ ರಾಜಧಾನಿ ಪಯಣದ ಬಳಿಕ. ಪ್ರತೀ ಬಾರಿ 350 ಕಿ.ಮೀ. ಪ್ರಯಾಣ ಎಂದಾಗ ಸುಸ್ತಾಗುತ್ತಿದ್ದ ನಾನು, ಈ ಪ್ರಯಾಣವನ್ನು ಇಷ್ಟಪಟ್ಟಿದ್ದೆ. ಕೆ.ಎ.01  8002 ಕೆ.ಎಸ್.ಆರ್.ಟಿ. ಬಸ್ಸು, ಸೀಟ್ ನಂಬರ್ 23 ಮತ್ತು 24 ಇವೆಲ್ಲವನ್ನೂ ನನ್ನ ನೆನಪಿನಿಂದ ಅಳಿಸಲು ಸಾಧ್ಯವೇ ಇಲ್ಲ. ಶಿರಾಡಿ ಘಾಟ್ ಯಾವಾಗ ಪಾಸಾಯ್ತು? ಸಕಲೇಶ್ ಪುರ ಯಾವಾಗ ತಲುಪ್ತು ಗೊತ್ತಿಲ್ಲ. ಬಸ್ಸು ರಾಜಧಾನಿ ಪುರ ಪ್ರವೇಶ ಮಾಡುವಾಗ ಅಯ್ಯೋ ಇಷ್ಟು ಬೇಗ ತಲುಪಿ ಬಿಟ್ಟೆವಾ ಎಂದು ನಾನು ಹೇಳುವ ಮೊದಲು ನೀವು ಮನದಲ್ಲೇ ಹಾಗೆ ಎನಿಸಿದ್ದು ನನಗೆ ತಿಳಿಯದಾಯಿತು ಅಂದುಕೊಂಡ್ರಾ? ಬಸ್ಸಿನಲ್ಲಿದ್ದವರೆಲ್ಲಾ ಒಳ್ಳೇ ನಿದ್ರೆ ಹೊಡೆಯುವಾಗ ನಾವಿಬ್ಬರು ಮಾತ್ರ ನಿಶಾಚರಿಗಳಂತೆ ಇಡೀ ರಾತ್ರಿ ಜಾಗರಣೆ ಮಾಡಿದ್ದೆವು. ಯಾವುದೋ ಕಾರಣಕ್ಕೆ ನಾನು ಶಿವರಾತ್ರಿ ಯಾವಾಗ ಎಂದು ಕೇಳಿದಾಗ ಇವತ್ತೇ ಎಂದು ಹೇಳಿ ನಕ್ಕಿದ್ದು ಇನ್ನೂ ನೆನಪಿದೆ.

ನಮ್ಮ ಒಡನಾಟ ಇನ್ನಷ್ಟು ಗಟ್ಟಿಯಾಗಲು ಈ ಪಯಣ ನಿಮಿತ್ತವಾಗಿತ್ತು. ನನಗೂ ನಿಮ್ಮನ್ನು ಬಿಟ್ಟು ಮನೆಗೆ ಹೋಗಬೇಕು ಎನ್ನುವಾಗ  ಮನಸ್ಸು ಯಾವುದೋ ಕಡೆಗೆ ಹೊರಳಿತು. ಅದನ್ನು ಗಮನಿಸಿದ ನೀವು ನನ್ನ ಖುಷಿಯಾಗಿರಿಸಲು ಮಾಡಿದ ಪ್ರಯತ್ನ, ಆ ಎಲ್ಲಾ ಪ್ರಯತ್ನದ ಹಿಂದೆ ನಿಮ್ಮ ಮನದಲ್ಲಿರುವ ನೋವನ್ನೂ ಗಮನಿಸಿದ್ದೆ. ಕೆಂಪೇಗೌಡ ಬಸ್ ಸ್ಟಾಂಡಿನಲ್ಲಿ ಬಂದ ಬಸ್ಸುಗಳು ತಮ್ಮ ಪ್ರಯಾಣ ಮುಂದುವರಿಸುತ್ತಲೇ ಇದ್ದವು. ಆದರೆ ಪ್ಲಾಟ್ ಫಾರಂ 22ರ ಬಳಿ ಕೂತಿದ್ದ ನಾವು ಮತ್ತು ನಮ್ಮ ನೆನಪುಗಳಷ್ಟೇ ಅಲ್ಲಿ ಶಾಶ್ವತವಾಗಿದ್ದವು! ಅಂದು ನಿಮ್ಮ ಜೊತೆ ಪಯಣಿಸಲು ನಾನು ಪಟ್ಟ ಶ್ರಮ ತಿಳಿದಾಗ ನಿಮ್ಮ ಕಣ್ಣು ತುಂಬಿ ಬಂದದ್ದು, ಕಣ್ಣಂಚಿನಲ್ಲಿ ನೀರು ಜಿನುಗಿದ್ದನ್ನು ಮರೆಮಾಚಲು ನೀವು ಸಾಕಷ್ಟು ಪ್ರಯತ್ನಿಸಿದರೂ ನನ್ನ ಕಣ್ಣಿಗೆ ಅದು ಬಿದ್ದಿತ್ತು ಗೆಳೆಯ. ನನ್ನ ಎರಡೂ ಕೈಗಳನ್ನು ಹಿಡಿದು ಧನ್ಯತಾ ಭಾವದಿಂದ ಬೀರಿದ ನೋಟ ನನ್ನ ಮನದಲ್ಲಿ ಅಚ್ಚೊತ್ತಿದೆ.
ನಾನು ನನ್ನನ್ನೇ ಪ್ರಶ್ನಿಸಿದೆ, ಆ ದಿನ ನಿಮ್ಮನ್ನು ಕೇಳಿದ ಅದೇ ಪ್ರಶ್ನೆ. ಯಾಕೆ ನಾನು ನಿಮ್ಮನ್ನು ಇಷ್ಟೊಂದು ಹಚ್ಚಿಕೊಂಡಿದ್ದೇನೆ? ಉತ್ತರವಿಲ್ಲ. ಈಗಲೂ ಬರಿಯ ಪ್ರಶ್ನೆ ಮಾತ್ರ. ಉತ್ತರ ಗೊತ್ತಾದಾಗ ತಿಳಿಸಲು ಮರೆಯಬೇಡಿ....
ನಿಮ್ಮೊಳಗೊಬ್ಬಳು,
ಪ್ರಿಯ ಗೆಳತಿ

1 ಕಾಮೆಂಟ್‌: