ಮೇ 17, 2011

ಕಬಿ ಅಲ್ವಿದಾ ನಾ ಕೆಹೆನಾ

ಪ್ರಿಯ ಗೆಳತಿ,
ನಿನ್ನ ಪ್ರಶೆಗೆ ಛೇ, ಅಲ್ಲಲ್ಲ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಅಷ್ಟೊಂದು ಕಠಿಣವಾಗಿದೆಯಾ ಆ ಪ್ರಶ್ನೆ ಎಂದುಕೊಳ್ಳಬೇಡ. ಅದಕ್ಕೆ ಉತ್ತರ ಹುಡುಕುವುದು ಬೇಡ ಅನ್ನೋದು ನನ್ನ ಯೋಚನೆ. ಒಂದು ವೇಳೆ ಅದಕ್ಕೆ ಕಾರಣ ಗೊತ್ತಾಗಿ ಆ ಕಾರಣ ಒಂದು ಹಂತಕ್ಕೆ ಕೊನೆಗೊಂಡಾಗ ನಾವು ಮತ್ತೆ ದೂರವಾದರೆ? ಬೇಡ, ಅಂತಾ ಕಾರಣ ನನಗೆ ಬೇಡ. ಆದರೆ ಒಂದು ಮಾತನ್ನು ನಿನ್ನಲ್ಲಿ ಹೇಳಲೇ ಬೇಕಿದೆ ಕಣೇ, ನೀನು ಅದನ್ನು ಅಂಗೀಕರಿಸುತ್ತೀಯಾ ಎನ್ನುವ ಭರವಸೆಯ ಮೇಲೆ ಹೇಳುತ್ತಿದ್ದೇನೆ ಕೇಳು...
ಯಾವುದೇ ಕಾರಣಕ್ಕೂ ನೀನು ನನ್ನಿಂದ ದೂರ ಹೋಗಬೇಡ. ಯಾಕಂದ್ರೆ ಅಷ್ಟು ನೀನು ನನ್ನ ಹೃದಯಕ್ಕೆ ಹತ್ತಿರವಾಗಿ ಬಿಟ್ಟಿದ್ದೀ. ಅಷ್ಟು ಆತ್ಮೀಯವಾಗಿದ್ದೀಯ. ನಮ್ಮ ಸಂಬಂಧ ಸೂರ್ಯ ಚಂದ್ರರಿರುವ ಕಾಲ ಹೀಗೆ ಇರಬೇಕು ಎನ್ನುವ ಆಸೆ ನನ್ನದಲ್ಲ ಆದರೆ ನಾವಿಬ್ಬರ ಕೊನೆಯ ಕ್ಷಣದವರೆಗೂ ಈ ಸಂಬಂಧವನ್ನು ಕಾಪಾಡಬೇಕು.

ನನಗೊತ್ತು ಇದನ್ನು ಓದುತ್ತಿದ್ದಂತೆ ನಿನ್ನ ನಾಲಗೆ ತುದಿಯಲ್ಲಿರುವ ಪ್ರಶ್ನೆ ಯಾವುದು ಅಂತ. ಯಾಕೆ? ಅಂತ ನೀನು ಕೇಳಿದರೆ ನಾನು ಏನೂಂತ ಹೇಳಲಿ? ಒಂದು ವೇಳೆ ನೀನು ನನ್ನಿಂದ ದೂರವಾದರೆ ಇನ್ನೆಂದೂ ನಾನು ಯಾರನ್ನು ಇಷ್ಟೊಂದು ಹಚ್ಚಿಕೊಳ್ಳಲಾರೆ, ಆತ್ಮೀಯ ಮಾತುಗಳಂತು ನನ್ನಿಂದ ಗಾವುದ ದೂರ ಸರಿದಾವು, ನನಗೇ ಗೊತ್ತಾಗದಷ್ಟ್ಟು ನಾನು
ಬದಲಾಗಿರುತ್ತೇನೆ ಮತ್ತು ನಿರ್ಲಿಪ್ತನಾಗಿ ಬಿಡುತ್ತೇನೆ. ನಮಗಿಬ್ಬರಿಗಲ್ಲದೆ ಬೇರೆ ಯಾರಿಗೂ ಈ ನಿಗೂಢ ರಹಸ್ಯ ತಿಳಿಯಲಾರದು. ಆ ಕ್ಷಣವನ್ನು ನನ್ನಿಂದ ಊಹಿಸಲು ಸಾಧ್ಯವಿಲ್ಲ.
ನೀನಿಲ್ಲದೇ ನನಗೇನಿದೇ?
ಮನಸೆಲ್ಲ ನಿನ್ನಲ್ಲೆ ನೆಲೆಯಾಗಿದೆ

ನನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ
ಯಾವುದೋ ಒಂದು ಘಳಿಗೆ ನಿನ್ನ ಪರಿಚಯವಾಯ್ತು. ಅದು ಅತ್ಯಲ್ಪ ಅವಧಿಯಲ್ಲಿ ಇಷ್ಟೊಂದು ಆಪ್ತವಾಗಿ ಬಿಡುತ್ತೆ ಎಂದು ಅಂದುಕೊಂಡಿರಲಿಲ್ಲ. ನಿನ್ನಲ್ಲಿ ಮಾತನಾಡದೇ ಇದ್ದಾಗ ಮನದಲ್ಲೇನೋ ಬೇಸರ. ಆ ನಿನ್ನ ದನಿಯಲ್ಲಿ ಏನೋ ಇದೆ ಕಣೆ. ಆ ದನಿಯನ್ನು ಕಿವಿ ತುಂಬಿಸಿ ದಿನ ಶುರುವಾದರೆ, ಮನದಲ್ಲೇನೋ ಪುಳಕ. ಪ್ರತೀ ದಿನ ನಿನ್ನ ಮಾತು ಕೇಳಲೇ ಬೇಕು. ದಿನದ ಆರಂಭ ಮತ್ತು ನಿನ್ನ ನೆನಪುಗಳೊಂದಿಗೆ ನಿದ್ದೆಗೆ ಜಾರೋ ಸಮಯ ನಿನ್ನ ಮುತ್ತಿನಂಥಾ ಮಾತುಗಳು ನನ್ನ ಜೊತೆಗಿರಬೇಕು.
ಗೊತ್ತಾ ನಿಂಗೆ ನನ್ನ ಇಷ್ಟದ ಪಯಣಕ್ಕೆ ರೆಡಿಯಾಗಿದ್ದೇನೆ.
ಅದೇ ಭೂಮಿ ಅದೇ ಭಾನು
ನಯನ ನೂತನ
ದಾರಿ ಅದೇ ತಿರುವು
ಪಯಣ ನೂತನ
ನನ್ನ ಪ್ರಿಯ ಗೆಳತಿ ಸಿಕ್ಕ ಆ ಪಯಣವನ್ನು ನಾನು ತುಂಬಾ ತುಂಬಾ ಇಷ್ಟ ಪಡುತ್ತೇನೆ ಕಣೆ. ಮನದಲ್ಲಿ ಯಾವ ಭಾವನೆಯೂ ಇಲ್ಲದೆ ಅವಳಿ ನಗರಕ್ಕೆ ಹೋದಾಗ ಕೇವಲ ಇದ್ದಿದ್ದು ಕೆಲಸದ ಯೋಚನೆ. ಆದರೆ ಆ ಒಂದು ಗಂಟೆಯ ನಿನ್ನ ಮಾತುಕತೆಯಲ್ಲಿ ಅದೆಷ್ಟು ಆತ್ಮೀಯತೆ ತುಂಬಿಸಿದೆ, ಸೋತು ಹೋದೆ ಕಣೆ ನಿನ್ನ ಆ ಮಾತಿಗೆ. ನಿನ್ನ ಬಗ್ಗೆ ಹೇಳು ಅಂದ್ರೆ ಅಷ್ಟು ಸುಲಭದಲ್ಲಿ, ಕೇವಲ ಎರಡು ವಾಕ್ಯದಲ್ಲಿ ನಾ ಹೇಗೆ ಹೇಳಲಿ?
ತುಂಬಾ ಚೂಟಿ, ಕೆಲಸದಲ್ಲಿ ಶ್ರದ್ಧೆ ಇರೋ, ನಗು ನಗುತ್ತಾ ಮಾತಾಡೋ, ನಮ್ಮೂರ ಈ ಹುಡ್ಗಿ ಮಾತಲ್ಲೇ ಇಷ್ಟು ಹತ್ತಿರ ಆಗಿ ಬಿಟ್ಟಿದ್ದಾಳೆ. ನನ್ನ ಸ್ನೇಹ, ಪ್ರೀತಿ ಯಾಕೆ ಇಷ್ಟ ಪಟ್ಟಳು? ನೀನಾಗಿ ಮಾತನಾಡಿಸದಿದ್ದರೆ, ಈ ಪ್ರೀತಿ, ಆತ್ಮೀಯತೆ ನನಗೆ ಸಿಕ್ತಿರಲಿಲ್ಲ. ನಿಜಕ್ಕೂ ಹ್ಯಾಟ್ಸ್ ಆಫ್ ಡಿಯರ್. ನಿನ್ನ ಬಗ್ಗೆ ಹೇಳಲು ನನಗೆ ಏನೂ ತಿಳಿಯುತ್ತಿಲ್ಲ. ಎಷ್ಟು ಹೇಳಿದರೂ ನಿನ್ನ ಆತ್ಮೀಯತೆಯ ಮುಂದೆ ಅದು ಕಡಿಮೆಯೇ. ಕೊನೆಗೆ ಮತ್ತೊಮ್ಮೆ ನೆನಪಿಸುತ್ತೇನೆ, ನನ್ನ ದೂರ ಮಾಡಬೇಡ ಗೆಳತಿ.
ಇಂತೀ,
ಪ್ರಿಯ ಗೆಳೆಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ