ಫೆಬ್ರವರಿ 19, 2011

ಬಹಳ ದಿನಗಳ ಬಳಿಕ

ಬಹಳ ದಿನಗಳ ನಂತರ ಮನಸು ಬಿಚ್ಚಿ ಬರೆಯಬೇಕು ಅನ್ನಿಸಿತು. ಮನಸ್ಸಿಗೆ ತೋಚಿದ್ದು ಗೀಚುತ್ತೀನಿ ಅಷ್ಟೆ.
ಕರಾವಳಿಯಿಂದ ದೂರ ಬಂದು ದಿನ ಕಳೆದದ್ದೇ ತಿಳಿಯಲಿಲ್ಲ. ಮನಸು ಯಾಕೋ ಬೇಸರಿಸುತ್ತಿದೆ. ಗೊತ್ತು ಗುರಿ ಇಲ್ಲದ ಊರು, ನನ್ನವರು ಅಂತ ಯಾರೂ ಇಲ್ಲ ನನಗಿಲ್ಲಿ. ರಾಜಧಾನಿ ಸೇರಿದಾಗ ನನ್ನ ಆತ್ಮೀಯ ಗೆಳೆಯ ಗಣೇಶ್ ಅಲ್ಲೂ ಮಾತು ಬಿಟ್ಟಿದ್ದೆ. ತುಂಟಾಟ ಅಂಥ ಅಂದುಕೊಂಡೆ. "ನಾನು ಯಾರನ್ನೂ ಹಚ್ಚಿಕೊಂಡಿಲ್ಲ, ಈ ಕ್ಷಣ ನಾನು ಇಹಲೋಕ ತ್ಯಜಿಸಿದರೂ ನನಗಾಗಿ ಎರಡು ಹನಿ ಕಣ್ಣೀರು ಹರಿಸಲು ಬೆರಳಣಿಕೆಯಷ್ಟು ಜನ ಮಾತ್ರ! ನಾನು ಇರೋದೆ ಹಾಗೆ. ತಾವರೆ ಎಲೆಯ ಮೇಲೆ ಇರೋ ನೀರ ಹನಿಯಂತೆ. ಎಲೆಯ ಮೇಲೆ ಇರುವಷ್ಟು ಕ್ಷಣ ಅದರ ಇರವು. ಹಾಗೆಯೇ ನಾನು" ಎಂದುಕೊಂಡು ಯೋಚನೆ ಮಾಡುತ್ತಿದ್ದೆ.

ಈ ನಡುವೆ ಯಾಕೋ ಮನೆಯ ನೆನಪು ತುಂಬಾ ಕಾಡುತ್ತಿದೆ. ನಾನು ಅಂದುಕೊಂಡದ್ದನ್ನು ಸಾಧಿಸಬೇಕಾದರೆ ಇದನ್ನೆಲ್ಲ ದೂರ ಮಾಡಲೇಬೇಕು. ಅಮ್ಮ ನನ್ನ ಪ್ರೀತಿಸುವುದಿಲ್ಲ ಎಂದು ನಾನಂದುಕೊಂಡಿದ್ದೆ. ಆದರೆ ಈಗ ಅದೇ ಅಮ್ಮ ನನಗಾಗಿ ಅತ್ತಿದ್ದಳು. ಅಕ್ಕನ್ನ ಮದುವೆ ಮಾಡಿಕೊಟ್ಟಾಗ ಪಪ್ಪನ ಕಣ್ಣಲ್ಲಿ ಕಣ್ಣೀರು ನೋಡಿದ್ದೆ ಮತ್ತೆ ನೋಡಿದ್ದು ನಾನು ರಾಜಧಾನಿಗೆ ಹೊರಡಲು ಅಣಿಯಾದಾಗ. ಮನೆಯಲ್ಲಿದ್ದಾಗ ನನ್ನ ದೂಷಿಸುತ್ತಿದ್ದವರೆಲ್ಲರೂ ಮೌನದಲ್ಲಿಯೇ ಕಣ್ಣೀರಿಡುತ್ತಿದ್ದರು. ಈಗ ಮನೆಯವರೆಲ್ಲರ ಮುಖ ಕಣ್ಣ ಮುಂದೆ ಸುಳಿದಾಡುತ್ತಿದೆ. ಫೋನಾಯಿಸಿದಾಗ ಪಪ್ಪ, "ಅಮ್ಮಂಗೆ ನಿನ್ನಲ್ಲಿ ಮಾತಾಡ್ಬೇಕಂತೆ ಇಲ್ಲಂದ್ರೆ ಅವಳಿಗೆ ನಿದ್ದೆ ಹತ್ತಲ್ವಂತೆ" ಎಂದಾಗ ನನ್ನ ಕಣ್ಣಿಂದ ನನಗರಿವಿಲ್ಲದಂತೆ ನೀರ ಹನಿ ಜಿನುಗಿತ್ತು. ನನ್ನನ್ನು ಪ್ರೀತಿಸೋರು ಇದ್ದಾರೆ ಅಂತ ಖುಷಿಯಾಗ್ತಿದೆ.

ಮತ್ತೆ ನಾನು ಏನೇ ತಕರಾರು ತಗೆದರೂ ಒಂಚೂರು ಬೇಸರಿಸದೆ ನನ್ನ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ನಾನು ಈ ವಿಚಾರದಲ್ಲಿ ಅದೃಷ್ಟವಂತೆ. ಹ್ಞಾಂ ಆ ರೀತಿ ಪ್ರೀತಿ ಎಲ್ಲರಲ್ಲಿಯೂ ಹುಟ್ಟಿಕೊಳ್ಳುವುದಿಲ್ಲವಂತೆ, ಎಲ್ಲರನ್ನು ಪ್ರೀತಿಸಲೂ ಆಗಲ್ಲ ಅನ್ನೋದನ್ನು ಇವತ್ತು ತಿಳ್ಕೊಂಡೆ. ಆದರೆ ನಾನು ಯಾರನ್ನು ಪ್ರೀತಿಸುತ್ತೇನೋ ಅವರಿಂದ ನನಗೆ ಪ್ರೀತಿ ಲಭಿಸಿದರೆ ಅದಕ್ಕಿಂತ ಮಿಗಿಲಾದುದು ನನಗೆ ಬೇರಾವುದೂ ಇಲ್ಲ.

ನನಗೆ ಜೀವನದ ಕೊನೆ ಉಸಿರಿರುವ ವರೆಗೂ ನನ್ನನ್ನು ಜೀವದಷ್ಟೇ ಪ್ರೀತಿಸುವ ಸ್ನೇಹ ಸಿಗಬೇಕು ಎಂದು ಬಯಸುವುದಿಲ್ಲ. ಆದರೆ ನನ್ನ ಖುಷಿಯನ್ನು ತಮ್ಮ ಖುಷಿಯಂತೆ ತಿಳಿಯುವ, ನಾನು ದುಃಖದಲ್ಲಿರುವಾಗ ಕಣ್ಣೀರು ಸುರಿಸಲು ಹೆಗಲು ಕೊಡುವ ಸ್ನೇಹ ಸಿಕ್ಕರೆ ಸಾಕು. ಆ ಸ್ನೇಹ ಸದಾ ನನ್ನ ಜೊತೆಗಿರುತ್ತೆ, ನಾನದರ ಜೊತೆಯಿರುತ್ತೀನಿ.

2 ಕಾಮೆಂಟ್‌ಗಳು:

  1. ನವ್ಯ ಜ್ಯೋತಿ ಅವರೇ...
    ಮನೆಯ ನೆನಪುಗಳು ಹಾಗೇ... ಕಾಡುತ್ತಲೇ ಇರುತ್ತೆ... ಅದೂ ಮನೆಯಿಂದ ದೂರವಿದ್ದು ಪರಿಸ್ಥಿತಿಯ ಒತ್ತಡಕ್ಕೆ ಕಟ್ಟುಬಿದ್ದು ಜೀವನ ನಡೆಸುವವರಿಗೆ ಇದು ಹೇಳಲಸಾಧ್ಯ...
    ಬಹಳ ದಿನಗಳ ಬಳಿಕ... ಬರಹದ ಆಶಯ ಉತ್ತಮವಾಗಿದೆ. ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ