ಕಾಗದವನ್ನು ಮನಮೋಹಕವಾಗಿ ಕತ್ತರಿಸುವ ಕಲೆಯೇ ಸಾಂಝಿ. ಈ ಜನಪದ ಕಲೆ ನಮ್ಮ ದೇಶದಲ್ಲಿ ಹಲವಾರು ಶತಮಾನಗಳಿಂದ ರೂಢಿಯಲ್ಲಿದೆ. ಉತ್ತರ ಭಾರತದಲ್ಲಿ ಸಾಂಝಿ ಕಲೆ ಬಹಳ ಪ್ರಚಲಿತದಲ್ಲಿದೆ. ಕೃಷ್ಣನ ಕಥೆಯನ್ನು ಇದೇ ಕಲೆಯಲ್ಲಿ ಹೇಳುತ್ತಿದ್ದರು. ಭಕ್ತಿ ಪೂರ್ವಕವಾಗಿದ್ದರಿಂದ ಹಬ್ಬ ಹರಿದಿನಗಳಿಗೆ ಇದು ವಿಶೇಷ ಆಕರ್ಷಣೆ. ಹಿಂದೆ ರಂಗೋಲಿಯನ್ನು ಹಾಕಲು ಇದೇ ಸಾಂಝಿಯನ್ನು ಬಳಸುತ್ತಿದ್ದರು.
ಈಗ ರಂಗೋಲಿಗೆ ಬಳಸುವ ಡಿಸೈನಿಂಗ್ ಪ್ಲೇಟ್(ತಟ್ಟೆ)ಗಳ ಕಲ್ಪನೆ ಆಗಲೇ ಇತ್ತು. ಕಾಗದವನ್ನು ಕತ್ತರಿಸಿ, ಅದರ ಮೇಲೆ ರಂಗೋಲಿ ಪುಡಿ ಹರವಿ ಮೆಲ್ಲನೆ ಆ ಕಾಗದವನ್ನು ಮೇಲಕ್ಕೆತ್ತಿದರೆ ಸುಂದರವಾದ ರಂಗೋಲಿ ರೆಡಿ ಆಗುತ್ತಿತ್ತು. ನಂತರ ಅದೇ ಕೊಂಚ ಬದಲಾವಣೆಯ ಸ್ವರೂಪ ಪಡೆದುಕೊಂಡಿತು ಎನ್ನುತ್ತಾರೆ ಈ ಕಲಾವಿದ.
ಕಲೆಯೊಂದೇ ನಾಮ ಹಲವು
ಜನಪದ ಕಲೆಯಾದ ಸಾಂಝಿ ಅನೇಕ ದೇಶದಲ್ಲಿದೆಯಾದರೂ ಇದು ನಮ್ಮ ದೇಶದ ಕಲೆ ಎನ್ನಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಇದು ಗುರುತಿಸಲ್ಪಡುತ್ತದೆ. ಕಿರಿ-ಗಾಮಿ, ಕಿಪಿ-ಇ, ಮನ್-ಕಿರಿ, ಸೆನ್-ಶಿ, ಜಿಯಾನ್-ಝಿ ವೊದಲಾದ ಹೆಸರುಗಳಿಂದ ಚೀನಾ ಹಾಗೂ ಜಪಾನ್‌ಗಳಲ್ಲಿ ಜನಪ್ರಿಯವಾಗಿದೆ. ಈ ಕಲೆ ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪೋಲೇಂಡಿನಲ್ಲಿ ವಿಚಿನಾನಕಿ, ಸ್ಪೇನಿನಲ್ಲಿ ಆಪೆಲ್ ಪಿಕಡೊ ಫ್ರಾನ್ಸ್‌ನಲ್ಲಿ ಡೆಕೋಪರ್ ಎಂದು ಕರೆಯುತ್ತಾರೆ. ಅಮೆರಿಕಾದಲ್ಲಿ ಪೆಪಿಟೊಮನಿಯ ಎಂದರೆ ಭಾರತದ ಸಾಂಝಿ.ನಮ್ಮ ಕರ್ನಾಟಕದಲ್ಲಿಯೂ ಸಾಂಝಿಕಲೆಯನ್ನು ಬಳಸುತ್ತಾರೆ. ಯಾರಿಗೂ ಇದರ ನಿರ್ದಿಷ್ಟ ಹೆಸರು ತಿಳಿದಿಲ್ಲ. ಮದುವೆ ಮುಂಜಿಗೆ ಮನೆ, ಮಂಟಪವನ್ನು ಸಿಂಗಾರ ಮಾಡಲು ಇದನ್ನು ಬಳಸುತ್ತಾರೆ. ಕುಮುಟಾ, ಕಾರವಾರ, ಶಿರಸಿ ಕಡೆಗಳಲ್ಲಿ ಅದನ್ನು ಪರ್ಪರೆ ಎಂದು ಕರೆಯುತ್ತಾರೆ. ರಾಜ್ಯದ ಇತರೆಡೆಗಳಲ್ಲಿಯೂ ಇದನ್ನು ವ್ಯಾಪಕವಾಗಿ ಬಳಸುತ್ತಾರೆ.
ಕಲೆ ಯಾರಿಗೂ ಸ್ವಂತದ್ದಲ್ಲ. ಈ ಮಾತು ಹುಸೇನಿಯವರಿಗೆ ಒಪ್ಪುತ್ತದೆ. ಅವರ ತಮಗೆ ಗೊತ್ತಿರುವ ಈ ಕಲೆಯನ್ನು ಇತರರಿಗೆ ಹೇಳಿ ಕೊಡುವ ವಿಶಾಲ ಮನೋಭಾವವುಳ್ಳವರು. ಸಾಂಝಿ ಎನ್ನುವುದು ಬಾನೆತ್ತರಕ್ಕೆ ಬೆಳೆಯಬೇಕೆನ್ನುವುದು ಅವರ ಆಶಯ. ಅದಕ್ಕಾಗಿ ಹಳ್ಳಿಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಉಚಿತವಾಗಿ ತರಬೇತಿ ಕೊಡುತ್ತಾರೆ. ತಮಗೆ ತಿಳಿದಿರುವ ಈ ಕಲೆಯನ್ನು ಆಸಕ್ತರಿಗೆ ಕಲಿಸಿಕೊಡಲು ಅವರಿಗೆ ಅದೇನೋ ಖುಷಿ ಒಟ್ಟಿನಲ್ಲಿ ಈ ಕಲೆ ತನ್ನ ಸ್ವಂತ ಹೆಸರಿನಲ್ಲಿ ಪ್ರಚಾರಕ್ಕೆ ಬರಬೇಕು, ಉಳಿಯಬೇಕು ಎನ್ನುವುದು ಅವರ ಮಾತು.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಯ್ಯದ್ ಫಕ್ರುದ್ದೀನ್ ಹುಸೇನಿ ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಶಿವನ ಸಮುದ್ರದವರು. ವಿದ್ಯಾಭ್ಯಾಸ ಒಡನಾಟವೆಲ್ಲ ಮೈಸೂರಿನಲ್ಲೇ ಹೆಚ್ಚು. ಹಾಗಾಗಿ ಮೈಸೂರು ಹುಸೇನಿ ಎಂದು ಜನಜನಿತ. ಧಾರವಾಡದ ಕರ್ನಾಟಕ ವಿವಿಯಲ್ಲಿ ಬಿಎಫ್‌ಎ ಪದವಿ. ವೈಜಯಂತಿ ಕಲಾಶಾಳೆಯಲ್ಲಿ ಆರ್ಟ್ ಮಾಸ್ಟರ್. ಜೆಡಿ ಮತ್ತು ಪೇಟಿಂಗ್‌ನಲ್ಲಿ ಬಿಎಫ್‌ಎ ವ್ಯಾಸಂಗ ಮಾಡಿದ್ದಾರೆ.
ಕಾಗದ ಕಲೆ ಮಾತ್ರವಲ್ಲದೆ. ಏಕ ರೇಖಾಚಿತ್ರ, ಕಾಗದ ಶಿಲ್ಪ, ಡ್ರಾಯಿಂಗ್ ಮತ್ತು ಪೇಟಿಂಗ್‌ನಲ್ಲಿಯೂ ಅವರು ಪಳಗಿದ್ದಾರೆ. ಆದರೆ ಕಾಗದ ಕಲೆಯನ್ನು ಬಲುವಾಗಿ ಪ್ರೀತಿಸುತ್ತಾರೆ.
ಸಾಧನೆಗೊಂದು ಸಲಾಮ್
ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ‘ಜಪಾನ್ ಹಬ್ಬ ೨೦೦೯’ರಲ್ಲಿ ಕಿರಿಗಾಮಿ ಪೇಪರ್ ಕಟ್ಟಿಂಗ್ ಕಾಗದ ಕಲೆಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ನಡೆಯುವ ರಾಜ್ಯಮಟ್ಟದ ಅಂಚೆಕುಂಚ ಸ್ಪರ್ಧೆಯಲ್ಲಿ ೨೦೦೧ರಿಂದ ಸತತ ನಾಲ್ಕು ಹಾಗೂ ೨೦೦೭ರಲ್ಲಿ ಪ್ರಶಸ್ತಿ. ಒಟ್ಟು ಐದು ಬಾರಿ ಪ್ರಶಸ್ತಿ. ೧೯೯೯ರಲ್ಲಿ ಮೈಸೂರು ದಸರಾ ಪ್ರಶಸ್ತಿ.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಡೆಸುವ ಚಿತ್ರ ಸಂತೆಯಲ್ಲಿ ೨೦೦೩ರಿಂದ ೨೦೧೦ರ ವರೆಗೆ ಚಿತ್ರರಚನೆ ಶಿಬಿರ ಮತ್ತು ಪ್ರದರ್ಶನ.
ಚಿತ್ರರಚನೆಗಾಗಿ ೨೦೦೧ರಲ್ಲಿ ಮೈಸೂರಿನ ಕನ್ನಡ ಸಂಸ್ಕೃತಿ ಇಲಾಖೆಯಿಂದ ಯುವ ಸಂಭ್ರಮ ಪ್ರಶಸ್ತಿ.
ಬೆಸ್ಟ್ ಮ್ಯೂರಲ್ ಅವಾರ್ಡ್.
ಇನ್ನೂ ಅನೇಕ ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ