ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು.... ಈ ಹಳೆಯ ಗೀತೆಯನ್ನು ನಾನು ಈಗಲೂ ಆಗಾಗ ಗುನುಗುತ್ತಿರುತ್ತೇನೆ. ನನ್ನಾಣೆ ಅದು ಯಾವ ಚಿತ್ರದ ಹಾಡು, ಸಂಗೀತ ನಿರ್ದೇಶಕ ಯಾರು? ಅಂತ ನನಗೆ ಗೊತ್ತಿರಲಿಲ್ಲ. ಆದರೆ ಇಂಥಾ ಸುಮಧುರ ಹಾಡಿನ ಸಂಗೀತ ನಿರ್ದೇಶಕರನ್ನು ಕಾಣುವ ಭಾಗ್ಯ ನನ್ನದಾಗಿತ್ತು. ಆ ಸಂಗೀತ ‘ರತ್ನ’ರನ್ನು ಕಂಡು ನಾನು ಪುಳಕಿತಗೊಂಡಿದ್ದೆ. ಅವರ ಜೊತೆಗಿನ ಆ ಕ್ಷಣಗಳ ಅನುಭವ, ಅವರ ಬದುಕಿನ ಹರವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.
ಬೆಳೆದಿದೆ ನೋಡ ಬೆಂಗಳೂರು ನಗರ..... ಹೋಗದಿರಿ ಸೋದರರೆ... ಈಶ್ವರನೆಂದರೂ ಒಬ್ಬನೇ ಅಲ್ಲಾ ಎಂದರೂ ಒಬ್ಬನೇ... ನಾನೋಡಿ ನಲಿಯುವ ಕಾರವಾರ.... ಇಂದು ನಿನ್ನ ಜನುಮದಿನ ಇರಲಿ ನಿನಗೆ ಬುದ್ದಿ ಮನ.... ಕದ್ದು ನೋಡುವೆ ಏಕೆ ಎಲೆ ಹೆಣ್ಣೆ.... ಚೂರಾಯಿತೆ ಒಲವಿನ ಚಿತ್ರ.... ಚೆಲುವಿನ ಗಣಿಯಾಗಿ ನಮ್ಮೂರ... ಶತಕೋಟಿ ತಾರೆಗಳು... ಇಂಥಾ ಸುಮಧುರ ಗೀತೆಗಳನ್ನು ಕೇಳಿದ್ದೇವೆ, ಆನಂದಿಸಿದ್ದೇವೆ. ಆದರೆ ಅದರ ಹಿಂದಿರುವ ಶ್ರಮಜೀವಿಯ ಕುರಿತು ತಿಳಿಯೋಣ. ನಾನು ಆಕಸ್ಮಿಕವಾಗಿ ಬೆಂಗಳೂರು ನಗರ ತಲುಪಿದಾಗ ಭೇಟಿಯಾಗುವ ಅವಕಾಶ ಸಿಕ್ಕಿದ್ದು ಇವುಗಳಿಗೆ ರಾಗ ಸಂಯೋಜನೆ ಮಾಡಿದ ಮಹಾನ್ ಸಂಗೀತ ನಿರ್ದೇಶಕ ಆರ್. ರತ್ನಂಅವರದ್ದು. ೮೬ರ ಹರೆಯವಾದರೂ ೨೬ರ ಹುಮ್ಮಸ್ಸು ಕಂಡು ನಾನೇ ಚಕಿತಳಾದೆ. ಮುಂದೊಂದು ಹಾರ್ಮೋನಿಯಂ ಪೈಟ್ಟಿಗೆ ಬದಿಯಲ್ಲಿ ಲಯ ಪೆಟ್ಟಿಗೆ ಇಟ್ಟುಕೊಂಡು ರಾಗ ಸಂಯೋಜಿಸುತ್ತಿದ್ದರು.
ಬೆಂಗಳೂರು ಅಮೃತಹಳ್ಳಿಯ ವರದರಾಜ್ ಲೇಔಟ್‌ನಲ್ಲಿರುವ ಒಂದಸ್ತಿನ ಮನೆಯಲ್ಲಿದ್ದ ರತ್ನ ಅವರನ್ನು ಕಾಣಲು ಹೋಗಿದ್ದರಿಂದ ಇನ್ನಷ್ಟು ಸಂಭ್ರಮದಲ್ಲಿ ಅತ್ತಿಂದಿತ್ತ ಓಡಾಟ. ವೊದಲಂತಸ್ತಿನಲ್ಲಿದ್ದ ತಮ್ಮ ಕೋಣೆಗೊಮ್ಮೆ, ಪಕ್ಕದಲ್ಲಿ ಸಂಗೀತ ಸಾಧನಗಳಿರುವ ರೂಮಿಗೊಮ್ಮೆ, ಹಾಲ್‌ಗೊಮ್ಮೆ ಹೀಗೆ ತಮ್ಮ ಬೆನ್ನು ಬಾಗಿಸಿ ಚಕಚಕನೇ ಹೆಜ್ಜೆ ಹಾಕುತ್ತಿದ್ದರು ರತ್ನಂ. ನಂತರ ಹಾಲ್‌ನಲ್ಲಿರುವ ಹಾರ್ಮೋನಿಯಂ ಪೆಟ್ಟಿಗೆಯನ್ನು ಹಿಡಿದು ಕುಳಿತು ಅದೇನೋ ರಾಗ ಸಂಯೋಜಿಸಿದ್ದರು. ಇದೆಲ್ಲವೂ ಈಗ. ಆದರೆ ನಾವು ಅವರು ಅಜ್ಞಾತರಾಗಿದ್ದ ಕಾಲವನ್ನು ತಿಳಿಯಲೇ ಬೇಕು.
ಫ್ಲಾಶ್ ಬ್ಯಾಕ್..
ಸ್ವತಃ ಸಂಗೀತ ಪ್ರಿಯ, ಗಾಯಕ, ಸಾಹಿತಿ ಮತ್ತು ನಾಟಕಕಾರರಾಗಿರುವ ವೆಂಕಟರಾಮಯ್ಯನವರ ಮನ ಈ ಸಂಗೀತ ಗುರುವಿನ ದುಸ್ಥಿತಿ ಕಂಡು ಮರುಗಿತು. ಚಿತ್ರತಾರಾದಲ್ಲಿ ಲೇಖನ ಪ್ರಕಟವಾದ ಮರುದಿನವೇ ಚೆನ್ನೈಗೆ ಹೋಗಿ ಜೋಪಡಿಯಿಂದ ರತ್ನಂ ಅವರನ್ನು ತಮ್ಮ ಮನೆಗೆ ಕರೆತಂದು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ರತ್ನಂ ಅವರಿಗೆ ಇನ್ನೊಂದು ಸುಂದರ ಬಾಳು ನೀಡುತ್ತಿದ್ದಾರೆ. ಅಂದಹಾಗೆ ವೆಂಕಟರಾಮಯ್ಯ ಮತ್ತು ರತ್ನಂ ವೊದಲಿನಿಂದಲೂ ಗೆಳೆಯರು.
ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಆರ್. ರತ್ನಂ ಅವರನ್ನು ಉದ್ಯಮು ನೆನಪಿಸಿಕೊಂಡಿದ್ದು ಕಡಿಮೆಯೇ. ಸಂಗೀತವೇ ನನ್ನ ಉಸಿರು ಎಂದು ತಿಳಿಸದು ಸಂಗೀತಕ್ಕಾಗಿಯೇ ಬದುಕಿರುವ ರತ್ನಂ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೆರೆದ ಸಂಗೀತ ಸಾಮ್ರಾಟ. ಉದ್ಯಮ ರತ್ನಂ ಅವರಿಂದ ಸಾಕಷ್ಟು ಲಾಭ ಪಡೆದು ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಕೈ ಬಿಟ್ಟಿತ್ತು. ಕಡೆಯ ಪಕ್ಷ ಅವರು ಎಲ್ಲಿದ್ದಾರೆ ಎನ್ನುವ ವಿಚಾರವೂ ಗೊತ್ತಿಲ್ಲದಾಯಿತು.
ಇದೆಲ್ಲಾ ಫ್ಲಾಶ್ ಬ್ಯಾಕ್, ಇದು ಒತ್ತಟ್ಟಿಗಿರಲಿ. ಈಗ ನಾನು ಕಂಡ ಈ ಸಂಗೀತ ಗುರುವಿನ ಕತೆ ಹೇಳುತ್ತೇನೆ... ಈಗಿರುವ ತಮ್ಮ ಸುಸ್ಥಿಗೆ ಕಾರಣರಾಗಿರುವ ಗಣೇಶ್ ಕಾಸರಗೋಡು ಮತ್ತು ವೆಂಕಟರಾಮಯ್ಯ ಅವರಿಗೆ ಕೈಮುಗಿದು ನಮಸ್ಕರಿಸಿ ರತ್ನಂ, ಅಂದು ನನ್ನಲ್ಲಿ ಏನೂ ಇರಲಿಲ್ಲ, ಆದರೆ ಇಂದು ಹಾಗಲ್ಲ ಎಲ್ಲವೂ ಇದೆ. ನನ್ನ ಉಸಿರಾಗಿರುವ ಸಂಗೀತ ನನ್ನ ಜೊತೆಗಿದೆ. ನಾನು ಸಂತೋಷವಾಗಿದ್ದೇನೆ. ಈಗಲೂ ಸಂಗೀತಕ್ಕಾಗಿ ದುಡಿಯುತ್ತಿದ್ದೇನೆ. ಚೆನ್ನೈಯಿಂದ ಬೆಂಗಳೂರಿಗೆ ಬಂದ ನಂತರ ಸುಮಾರು ೭೦೦ ಹಾಡುಗಳಿಗೆ ರಾಗ ಸಂಯೋಜಿಸಿದ್ದೇನೆ. ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದೇನೆ ಎನ್ನುತ್ತಾ ಮತ್ತೆ ಹಾರ್ಮೋನಿಯಂ ಮೇಲೆ ಕೈಯಾಣಿಸುತ್ತಾ ಆಲಾಪ ಹೊರಡಿಸಿ ಯಾವುದೋ ರಾಗದ ಹುಡುಕಾಟದಲ್ಲಿ ಮಗ್ನರಾದರು!
ನೀವು ಯಾವೆಲ್ಲಾ ಭಾಷೆಯಲ್ಲಿ ಸಂಗೀತ ನಿರ್ದೇಶಿಸಿದ್ದೀರಿ ಎಂದಾಗ, ಒಂದು ಕ್ಷಣ ಮೌನವಾಗಿ ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಶ್ ಮತ್ತೆ ತುಳುವಲ್ಲೂ ಸಂಗೀತ ನಿರ್ದೇಶಿಸಿದ್ದೇನೆ. ಕೆ.ಎನ್. ಟೇಲರ್ ಅವರ ಒಂದು ತುಳು ಚಿತ್ರಕ್ಕೆ ಸಂಗೀತ ನೀಡಿದ್ದೇನೆ. ಎಂದು ನಕ್ಕರು. ತುಳು ಹಾಡು ನೆನಪಿಗೆ ಬರುತ್ತಾ ಎಂದು ಕೇಳಿದಾಗ ತಲೆಯಾಡಿಸಿ ತುಳು ನನಗೆ ಬರುವುದಿಲ್ಲ, ಅದು ತುಂಬಾ ಕಠಿಣ ಎಂದ ರತ್ನಂಗೆ ನಾನು ತುಳುನಾಡಿನವಳು ಎಂದೆ. ತುಳುವರು ಹೃದಯವಂತರು, ಅವರದು ನಿರ್ಮಲ ಮನಸ್ಸು, ಇಲ್ಲಿನವರ ಹಾಗೆ ಎರಡು ಮನಸ್ಸು ಇರುವುದಿಲ್ಲ ಆದರೆ ಭಾಷೆ ಮಾತ್ರ ಕಠಿನ ಎಂದು ಮತ್ತೊಮ್ಮೆ ರತ್ನಂ ಮುಗುಳ್ನಗೆ ಬೀರಿದರು.
ಚಿತ್ರಗೀತೆಗಳು ಮಾತ್ರವಲ್ಲದೇ ಭಕ್ತಿಗೀತೆಗಳು, ಭಾವಗೀತೆಗಳು ದೇಶಭಕ್ತಿ ಗೀತೆಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ ರತ್ನಂ.ಸಂಗೀತ ರತ್ನ ವಿದ್ಯಾಲಯ
ಆರ್. ರತ್ನಂ ಅವರನ್ನು ಮನೆಗೆ ಕರೆ ತಂದ ಕೆ.ಎಂ. ವೆಂಕಟರಾಮಯ್ಯ ಅವರು ರತ್ನಂ ಅವರ ಹೆಸರಿನಲ್ಲಿ ಒಂದು ಸಂಗೀತ ಶಾಲೆಯನ್ನು ತೆರೆದಿದ್ದು ಅದರ ಪೂರ್ಣ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ೨೦೦೯ರ ಜನವರಿಯಲ್ಲಿ ಸಂಗೀತ ರತ್ನ ವಿದ್ಯಾಲಯ ಎನ್ನುವ ಸಂಗೀತ ಶಾಲೆಯು ಉದ್ಘಾಟನೆಗೊಂಡು ಅನೇಕ ಮಕ್ಕಳೀಗೆ ಸಂಗೀತ ಶಿಕ್ಷಣ ನೀಡುತ್ತಿದೆ. ವೆಂಕಟರಾಮಯ್ಯನವರ ಕೆ.ಎಂ.ವಿ. ಭುವನೇಶ್ವರ್ ಹಿಂದೂಸ್ತಾನಿ, ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಪಡೆದು ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಕಲಿಸುತ್ತಾರೆ. ರತ್ನಂ ವಾದ್ಯ ಸಂಗೀತ ಹೇಳಿಕೊಡುತ್ತಾರೆ.
ತಮಿಳ್ನಾಡಿನ ಸಂಗೀತಗಾರ ಕನ್ನಡದತ್ತ ವಾಲುವುದಕ್ಕೆ ಕಾರಣ ಸಿ.ವಿ. ಶಂಕರ್. ಅವರು ‘ಮನೆಕಟ್ಟಿ ನೋಡು’ ಚಿತ್ರದ ಸಂಗೀತ ನಿರ್ದೇಶನ ಅವಕಾಶ ಅವಕಾಶ ನೀಡಿದ್ದು. ಆನಂತರ ಪದಧರ, ನಮ್ಮ ಊರು, ಕಪ್ಪುಬಿಳುಪು, ಭಲೇ ಜೋಡಿ, ಪೂರ್ಣಿಮಾ, ಮಹಡಿ ಮನೆ, ಚದುರಂಗ, ಭಾಂಧವ್ಯ, ಮಹಾತಪಸ್ವಿ, ಐದುಬೆರಳು ಸೇರಿದಂತೆ ೫೫ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡಕ್ಕಾಗಿ ದುಡಿದ ಅವರನ್ನು ನಾಡು ಗುರುತಿಸಿದ್ದು ಬಹಳ ತಡವಾಗಿ. ಅವರಿಗೆ ಸರಕಾರದಿಂದಾಗಲೀ, ಚಿತ್ರೋದ್ಯಮದಿಂದಾಗಲೀ ಯಾವುದೇ ಸಂಮಾನಗಳು ಲಭಿಸಿರಲಿಲ್ಲ. ಕಳೆದೊಂದು ದಶಕದಿಂದ ಎಚ್ಚೆತ್ತ ನಾಡು ಅವರನ್ನು ಗುರುತಿಸಿದೆ. ಹಲವಾರು ಕಡೆಗಳಲ್ಲಿ ಅವರಿಗೆ ಸನ್ಮಾನಗಳು ನಡೆದಿವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಜೀವಮಾನ ಸಾಧನೆಗಾಗಿ ಅಪ್ಪಾಜಿ ಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಗರ್ ಪ್ರಶಸ್ತಿ ಅವರ ಮುಡಿಗೇರಿದೆ. ಈ ಟೀವಿ ವಾಹಿನಿಯ ಕೆನರಾ ಬ್ಯಾಂಕ್ ಎದೆತುಂಬಿ ಹಾಡುವೆನು ಮತ್ತು ದೂರ ದರ್ಶನದ ಮಧುರ ಮಧುರ ಮಂಜುಳ ಗಾನ ಕಾರ್ಯಕ್ರಮದಲ್ಲಿ ರತ್ನಂ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದಾರೆ.
ಇಂಥಾ ಧೀಮಂತರನ್ನು ಸಲಹುತ್ತಿರುವ ವೆಂಕಟರಾಮಯ್ಯನವರನ್ನು ಮಾತನಾಡಿಸಿದಾಗ ಅವರ ಸಂಗೀತಾಭಿಮಾನದ ಅನಾವರಣವಾಗುತ್ತದೆ. ತಮ್ಮಿಂದ ಸಂಗೀತ ಕ್ಷೇತ್ರದಲ್ಲಿ ಸಾಧಿಸಲು ಆಗಿದಿದ್ದುದ್ದನ್ನು ತಮ್ಮ ಗುರುಗಳ ಕೈಯಿಂದ ಮಾಡಿ ಅದರಲ್ಲಿ ಸಂತೃಪ್ತರಾಗಿದ್ದಾರೆ. (ಮಕ್ಕಳಿಗೂ ಸಂಗೀತ ಕಲಿಸಿ ಸಂಗೀತ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ) ಅದಕ್ಕೆ ಸಾಕ್ಷಿ ಎಂದರೆ ರತ್ನಂ ಬೆಂಗಳೂರಿಗೆ ಬಂದ ನಂತರ ೭೦೦ ಕ್ಕೂ ಮಿಕ್ಕಿ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದು. ನಿಸ್ವಾರ್ಥ ಮನೋಭಾವದಿಮದ ರತ್ನಂ ಅವರನ್ನು ಗುರುಗಳೆಂದು ಅಂಗೀಕರಿಸಿ ಗುರುಗಳಿಗೆ ಮಾತ್ರವಲ್ಲದೆ, ಅವರ ಮನೆಯವರಿಗೂ ಕಷ್ಟಕಾಲದಲ್ಲಿ ತಮ್ಮಿಂದಾದ ಸಹಾಯವನ್ನು ಮಾಡುತ್ತಾರೆ.ತಾಂತ್ರಿಕ ಸೌಲಭ್ಯಗಳು ಇಲ್ಲದಿದ್ದರೂ ಕನ್ನಡ ಚಿತ್ರಗೀತೆಗಳು ಸೊಗಸಾಗಿ ಸುಮಧುರವಾಗಿ ಮೂಡಿಬರಲು ಕಾರಣವಾಗಿದ್ದು ಗೀತೆರಚನಾಕಾರರು, ಗಾಯಕರು ಅವರ ಜೊತೆಗೆ ಡಬ್ಬಲ್ ಪರಿಶ್ರಮ ವಹಿಸುತ್ತಿದ್ದ ಸಂಗೀತ ನಿರ್ದೇಶಕರು. ಆರ್. ರತ್ನಂ ಉತ್ತುಂಗಕ್ಕೇರಲು ಅವರ ಸಂಗೀತದ ಮೇಲಿರುವ ಪ್ರೀತಿ ಮತ್ತು ಪರಿಶ್ರಮವೇ ಕಾರಣ. ಇವರು ರಾಜ್ಯೋತ್ಸವ ಪ್ರಶಸ್ತಿಗೂ ಅರ್ಹರು. ಇಂಥಾ ಅರ್ಹರನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮುಂದೆ ಮಾಡಬೇಕಾದ ಅನಿವಾರ್ಯತೆ ಇದೆ.
ಕೊನೆಹನಿ
ರತ್ನಂ ಅವರು ಎಷ್ಟು ಸೂಕ್ಷ್ಮಗ್ರಾಹಿ ಎಂದರೆ ನಾನು ಅವರ ಫೋಟೋ ಕ್ಲಿಕ್ಕಿಸಿ ನಂತರ ಒಂದು ಗ್ರೂಪ್ ಫೋಟೋ ಸೆರೆಹಿಡಿದೆ. ಅದರಲ್ಲಿ ನಾನು ಇಲ್ಲದ್ದನ್ನು ಗಮನಿಸಿದ ರತ್ನಂ, ನನ್ನನ್ನೂ ಕರೆದು ತಮ್ಮ ಜೊತೆ ನಿಲ್ಲಿಸಿ ಫೋಟೋ ತೆಗೆಸಿಕೊಂಡರು. ನಾನು ಇಂಥಾ ಮೇರು ಪ್ರತಿಭೆಯ ಜೊತೆ ನಿಂತು ಸಂಭ್ರಮಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ