ಪ್ರಿಯ ಗೆಳೆಯಾ,
ಯಾಕೋ ಗೊತ್ತಿಲ್ಲ ಇಂದು ಮನಸ್ಸು ಭಾರ ಎನಿಸುತ್ತಿದೆ. ಸದಾ ಹೀಗೆ ನಗುತ್ತಿರು ಎಂದು ನನ್ನ ಮುಖದಲ್ಲಿ ಹೊಳೆಯುವ ನಗು ಕಂಡು ಹೇಳಿದ್ರಿ. ಆದರೆ ಆ ನಗು ಕಳೆದ ನಾಲ್ಕೈದು ದಿನಗಳಲ್ಲಿ ಅಡ್ರೆಸ್ ಇಲ್ಲದೇ ಮಾಯವಾಗಿದೆ. ಮನದ ತುಂಬಾ ದುಗುಡ ತುಂಬಿದೆ. ಪ್ರೀತಿ ಮಾತುಗಳಿಗಾಗಿ ಮನಸು ಹಾತೊರೆಯುತ್ತಿದೆ. ನಿಮ್ಮ ಒತ್ತಡದಲ್ಲಿ ನೀವು ನನ್ನ ಕಡೆಗೆ ಗಮನ ಕೊಡಲು ಸಾಧ್ಯವಾಗೋಲ್ಲ. ಈ ವಿಚಾರದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಮನಸು ಮಾತ್ರ ನಿಮಗಾಗಿ ನಿಮ್ಮ ಪ್ರೀತಿಗಾಗಿ ಹಂಬಲಿಸುತ್ತಿದೆ.
ನಿಮ್ಮಂತೆ ಸ್ವಚ್ಛಂದ ಪ್ರೀತಿಯನ್ನು ಇನ್ನಾರು ಕೊಡಲು ಸಾಧ್ಯವಿಲ್ಲ ಕಂದಾ... ಹಾಗಂತೆ ನಿಮ್ಮ ಪ್ರೀತಿಗೆ ಪರ್ಯಾಯವನ್ನು ಹುಡುಕುತ್ತಿಲ್ಲ. ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನದಾಗ ಹಾಗೆನಿಸುತ್ತಿದೆ. ನನ್ನ ಜೊತೆಗೇ ಇದ್ದು, ನನ್ನ ಪ್ರೀತಿಗಾಗಿ ಹಂಬಲಿದ ವ್ಯಕ್ತಿಯೊಬ್ಬರಿಗೆ ನಾನು ಆತ್ಮೀಯತೆಯಿಂದ ಅಂದರೆ ನಿಮಗೆ ಗೊತ್ತಿದ್ದಂತೆ ಪ್ರೀತಿಯಿಂದಲೇ ಕಾಣುತ್ತಿದ್ದೆ. ಇನ್ನೊಬ್ಬರಿಗೆ ಪ್ರೀತಿ ಬೇಕು ಎಂದು ಹಂಬಲಿಸುವಾಗ ನೀಡ ಬೇಕಲ್ವೇ? ಆದರೆ ನೀವು ಹೇಳಿದ ಮಾತೀಗ ನೆನಪಿಗೆ ಬರುತ್ತಿದೆ ಗೆಳೆಯಾ, 'ಪ್ರೀತಿಯನ್ನ ಧಾರೆ ಎರೆ. ಆದರೆ ನಿನ್ನ ಪ್ರೀತಿಗೆ ಯಾರು ಆರ್ಹರು ಎಂದು ಮೊದಲು ತಿಳಿ' ಎಂದು ನೀವು ಸದಾ ಎಚ್ಚರಿಸುತ್ತಲೇ ಇದ್ರಿ. ನೀವು ಹೇಳಿದ ಮಾತು ನಿಜ ಎಂದು ಇವತ್ತು ನನಗೆ ಈಗ ಅರ್ಥವಾಗುತ್ತಿದೆ. ಪ್ರೀತಿಗೆ ಅನರ್ಹವಾದರಿಗೆ ಮಾತ್ರ ಯಾರಿಗೆ ಪ್ರೀತಿಯ ಅಗತ್ಯವಿಲ್ಲವೋ ಅವರಿಗೂ ಪ್ರೀತಿಯನ್ನು ಹಂಚ ಬಾರದು ಎಂದು ನಿರ್ಧರಿಸಿದ್ದೇನೆ ಕಂದಾ.
ಹ್ಞಾಂ ಕಳೆದ ನಾಲ್ಕೈದು ದಿನಗಳಿಂದ ನಾನು ತುಂಬಾ ರಿಸರ್ವ್ಡ್ ಆಗಿದ್ದೀನಿ. 'ಒಂದು ನಿಮಿಷಕ್ಕೆ ಎಷ್ಟು ಮಾತಾಡ್ತಿ' ಎಂದು ನೀವು ಹಿಂದೆ ಹೇಳಿದ ಹಾಗೇ ಈಗ ನನ್ನ ಕೇಳುವುದಿಲ್ಲ. ಹಿಂದೆ ನನ್ನ ನೋವನ್ನು ಮುಚ್ಚಿಡ್ತಾ ಇದ್ದೆ ಪುಟ್ಟ. ಆದ್ರೆ ಈಗ ಅದನ್ನು ಅದುಮಿಡ್ತಾ ಇದ್ದೀನಿ. ನನ್ನ ನೋವು ಯಾರಿಗೂ ತಿಳೀಬಾರದು ಎಂದು ತುಂಬಾ ಮಾತಾಡ್ತಾ ಇದ್ದೆ. ಈಗ ಎಲ್ಲಿ ಮಾತಾಡಿದ್ರೆ ನೋವು ಕಟ್ಟೆ ಒಡೆದು ಎಲ್ಲರಿಗೂ ಗೊತ್ತಾಗುತ್ತೆ ಎನ್ನೋ ಭಯ ಕಾಡ್ತಾ ಇದೆ. ಅದಕ್ಕೆ ಮೌನದ ಒಡವೆಯನ್ನು ಧರಿಸಿದ್ದೇನೆ. ನನಗೆ ಗೊತ್ತು, 'ನಿಂಗೆ ಒಡವೆಯ ಅವಶ್ಯಕತೆ ಇಲ್ಲ ಕಣೆ, ನೀನು ಮೊದಲಿನಂತಿದ್ದರೇ ಚೆನ್ನ, ನನ್ನ ಚಿನ್ನ' ಎಂದು ನೀವು ಹೇಳುತ್ತಿದ್ದರೇ ನಾನು ಏನು ಮಾಡಬೇಕು ನನಗೇ ತಿಳಿಯುವುದಿಲ್ಲ.
ನನಗೆ ಏನೂ ಬೇಡ, ನಿಮ್ಮ ಸವಿ ನೆನಪುಗಳೊಂದಿಗೆ ಈ ಸಮಾಜದಿಂದಲೇ ದೂರ ಸರಿದು, ಏಕಾಂಗಿ ಆಗಿರಬೇಕು ಅದೆಷ್ಟೋ ಬಾರಿ ಯೋಚಿಸಿದ್ದಿದೆ. ಮತ್ತೆ 'ನಾನೂ ಬೇಡ್ವಾ ನಿಂಗೆ' ಎಂದು ಕೇಳ್ಬೇಡಿ. ಯಾಕೆಂದರೆ, ನಾನೂ ಭೂಮಿಗೆ ಭಾರ, ನನ್ನನ್ನು ನಂಬಿರುವವರು ಯಾರೂ ಇಲ್ಲ. ನಾನಾಯ್ತು ನನ್ನ ಕೆಲಸ ಆಯ್ತು ಎಂದಿರುವವಳು ನಾನು. ಆದ್ರೆ ನಿಮಗೆ ಹಾಗಲ್ಲ ಅಲ್ವಾ? ಪ್ರೀತಿಯ ಸಂಸಾರ, ಅದರೊಂದಿಗಿನ ನೋವು ನಲಿವು, ಸುಖ ದುಃಖ ಎಲ್ಲವೂ ಇದೆ. ಕತ್ತಲೆಯಾದಾಗ ನಾನು ಬರಲಿಲ್ಲ ಎಂದು ನನಗಾಗಿ ಕಾಯುವ ಜೀವ ಇಲ್ಲ. ಆದರೆ ಸ್ವಲ್ಪ ತಡವಾದರೂ ನಿಮಗಾಗಿ, ನಿಮ್ಮ ಬರುವಿಕೆಗಾಗಿ ದಾರಿ ನೋಡುವ ನಾಲ್ಕು ಜೀವಗಳು ನಿಮ್ಮ ಮನೆಯಲ್ಲಿವೆ ಕಂದಾ. ಅವುಗಳನ್ನೆಲ್ಲಾ ಬಿಟ್ಟು ನನ್ನ ಜೊತೆ ಬನ್ನಿ ಎಂದು ಯಾವ ಬಾಯಿಯಿಂದ ಹೇಳಲಿ. ಆ ಅಧಿಕಾರವೂ ನನಗಿಲ್ಲ. ಅದಕ್ಕೇ ಯಾರಿಗೂ ತೊಂದರೆ ಕೊಡದೇ ನಾನೇ ದೂರ ನಡೆಯುತ್ತೇನೆ. ನಾನು ಸದಾ ಪ್ರೀತಿಸುವ ಪ್ರಕೃತಿ, ಹಸಿರು, ಗುಡ್ಡ- ಕಾಡು ಎಲ್ಲವೂ ನನ್ನೊಂದಿಗಿರುತ್ತದೆ. ನನ್ನ ಪ್ರೀತಿಯನ್ನವು ಧಿಕ್ಕರಿಸುವುದಿಲ್ಲ!
ಇಂತಿ ನಿಮ್ಮೊಗೊಬ್ಬಳು
ಪ್ರಿಯ ಗೆಳತಿ
ಇಂತಿ ನಿಮ್ಮೊಗೊಬ್ಬಳು
ಪ್ರಿಯ ಗೆಳತಿ
ಪ್ರೀತಿಯ ವ್ಯಾಕ್ಯೆ ಬಲು ಕಷ್ಟ...
ಪ್ರತ್ಯುತ್ತರಅಳಿಸಿಪ್ರೀತಿಯೆಂಬ ನಂಟು ಎಲ್ಲಿಂದ ಎಲ್ಲಿಗೂ ಗಂಟು ಬೀಳಬಹುದು...
ಇದು ಬರಿ ಪತ್ರವಾಗಿ ಕಾಣಿಸುವುದಿಲ್ಲ....ಸೋತ ಮನದ ದನಿಯಾಗಿ ಕಾಣಿಸುತ್ತದೆ... ಬೇಡ ಎನ್ನುತ್ತಲೇ ಬೇಕು ಎನ್ನುವಂತೆ ಕಾಡುವ ಮನಸ್ತ್ಥಿತಿ..ಭಾವಗಳ ಅಭಿವ್ಯಕ್ತಿ ಚೆನ್ನಾಗಿ ಮೂಡಿ ಬಂದಿದೆ....
ತುಂಬಾ ಧನ್ಯವಾದ ಸುಷ್ಮಾ.
ಪ್ರತ್ಯುತ್ತರಅಳಿಸಿಮನಸ್ಸಿಗೆ ತೋಚಿದ್ದು
ಇಲ್ಲಿ ಗೀಚಿದ್ದು!
olle baraha
ಪ್ರತ್ಯುತ್ತರಅಳಿಸಿista ayitu :)
ಧನ್ಯವಾದ ವಿಜಯ್ ಸರ್
ಪ್ರತ್ಯುತ್ತರಅಳಿಸಿ