ಜೂನ್ 4, 2013

ಇಂದು ವಿಶ್ವ ಪರಿಸರ ದಿನ: ಬದ್ಧತೆ ಬೇಡಿದೆ ಪ್ರಕೃತಿ


ಕಾಲಚಕ್ರ ಉರುಳುತ್ತಿವೆ... ಪ್ರಕೃತಿ ಪ್ರಿಯರ ದಿನ ಮತ್ತೊಮ್ಮೆ ಬಂದಿದೆ.
ಇಂದು ಜೂನ್‌ 5, ವಿಶ್ವ ಪರಿಸರ ದಿನ. ಈ ಬಾರಿಯ ಆಚರಣೆ ನಲವತ್ತನೆಯದು. ಈ ನಾಲ್ಕು ದಶಕಗಳಲ್ಲಿ ನಾವು ವಿಶ್ವ ಪರಿಸರ ದಿನ ಎಂದು ಜಪಿಸಿದ್ದು ಬಿಟ್ಟರೆ ಬೇರೇನು ಸಾಸಿದ್ದೇವೆ?! ಚಿಂತನೆಗಿದು ಸಕಾಲ.

ಏನಿದು ವಿಶ್ವ ಪರಿಸರ ದಿನ?
1972ರ ಜೂನ್‌ 5 ರಂದು ಮಾನವ ಪರಿಸರಕ್ಕೆ ಸಂಬಂಸಿದಂತೆ ವಿಶ್ವಸಂಸ್ಥೆಯ ಅಧಿವೇಶನ ನಡೆಯಿತು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ನೈಸರ್ಗಿಕ ವಿಪತ್ತುಗಳು, ಪರಿಸರ ನಿರ್ವಹಣೆ, ಸಂಪನ್ಮೂಲ ಕ್ಷಮತೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಗಂಭೀರತೆಯನ್ನು ಮನಗಂಡು ನಿವಾರಣೆಗೆ ಮಾರ್ಗೋಪಾಯ ಹುಡುಕುವ ನಿಟ್ಟಿನಲ್ಲಿ ಈ ಬಗ್ಗೆ ಒಂದು ದಿನವನ್ನು ಮೀಸಲಿರಿಸುವ ಪ್ರಸ್ತಾಪವಾಯಿತು. ಅದರ ಫಲವೇ 1973ರಲ್ಲಿ ಮೊದಲ ವಿಶ್ವ ಪರಿಸರ ದಿನ ಆಚರಣೆ, ತದನಂತರ ಜೂನ್‌ 5 ವಿಶ್ವ ಪರಿಸರ ದಿನವಾಗಿ ಆಚರಿಸಲ್ಪಡುತ್ತಿದೆ. ಹಾಗಂತ ಇದು ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು.


 
ಪ್ರಕೃತಿಯ ಬೆತ್ತಲು

ಜೀವಿಗಳ ರಕ್ಷಣೆ, ಪಾಲನೆ, ಪೋಷಣೆಗೆ ತನ್ನದೆಲ್ಲವನ್ನೂ ಮುಕ್ತವಾಗಿ ನೀಡಿದ ಪರಿಸರ ಇಂದು ಬೆತ್ತಲಾಗಿದೆ. ತನ್ನೊಡಲಲ್ಲಿ ಬೇಗುದಿಯನ್ನು ಇಟ್ಟುಕೊಂಡರೂ ತಣ್ಣನೆಯಾಗಿ ನಮ್ಮನ್ನು ಸಲಹಿದ ಪರಿಣಾಮವಾಗಿ ಇಂದು ಅದಕ್ಕೇ ನೆಲೆಯಿಲ್ಲದಂತಾಗಿದೆ. ಅಷ್ಟೇ ಅಲ್ಲ, ಅದರ ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಪರಿಸರ, ಭೂಮಿಯನ್ನು ಜೀವಂತವಾಗಿರಿಸುವುದು ಹಸಿರು ಸಸ್ಯಗಳು. ಆದರೆ ಇಂದು ಭೂಮಿಗೆ ಬಿದ್ದ ಬೀಜವೊಂದು ಮೊಳೆತು ಮೇಲೇಳಲು, ಆ ಬಳಿಕ ಜೀವಂತವಿರಲು ಹೋರಾಟವನ್ನೇ ಮಾಡಬೇಕಿದೆ. ಕಾರಣವೇನೆಂದು ಕೇಳಿದರೆ ತೋರುಬೆರಳು ಮನುಷ್ಯನ ಕಡೆಗೆ ತಿರುಗುತ್ತದೆ. ಪರಿಸರದಿಂದ ಎಲ್ಲವನ್ನು ಪಡೆದುಕೊಳ್ಳುವ ಆತ ಕೃತಜ್ಞನಾಗುವುದು ಬಿಟ್ಟು, ಅದರ ನಾಶಕ್ಕೇ ಮುಂದಾಗುತ್ತಿದ್ದಾನೆ. ಆ ಮೂಲಕ ಪರಿಸರ ಅಸಮತೋಲನಕ್ಕೆ ಕಾರಣನಾಗಿದ್ದಾನೆ.

ಪರಿಸರದ ಉತ್ತರ
ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಏರುತ್ತಿರುವ ವಾಯು, ಜಲ, ನೆಲ ಮಾಲಿನ್ಯ, ಕುಸಿಯುತ್ತಿರುವ ಅಂತರ್ಜಲ, ಅಶುದ್ಧ ನೀರು, ಗಾಳಿ, ಆಹಾರ ಪದಾರ್ಥಗಳು ಇಂದು ಪ್ರತಿಯೊಂದು ದೇಶವನ್ನು ಚಿಂತೆಗೀಡು ಮಾಡಿದೆ. ಮಾನವ ಕೈಯಾರೆ ತನ್ನ ನೆಲೆಯನ್ನು ತಾನೇ ನಾಶಮಾಡಿಕೊಳ್ಳುತ್ತಿದ್ದಾನೆ. ಅತಿಯಾದ ಕೈಗಾರೀಕರಣ, ನಗರೀಕರಣದ ಜೊತೆಗೆ ಅತಿಯಾದ ಸ್ವಾರ್ಥ ಹಾಗೂ ಪರಿಸರದ ಬಗ್ಗೆ ತಳೆದಿರುವ ನಕಾರಾತ್ಮಕ ಧೋರಣೆಗೆ ಪ್ರಕೃತಿಯೂ ಅತಿವಷ್ಠಿ, ಅನಾವಷ್ಠಿ, ಪ್ರಾಕೃತಿಕ ವಿಕೋಪಗಳು, ಸಾವು ನೋವು... ಮೂಲಕ ತನ್ನದೇ ಆದ ಉತ್ತರ ನೀಡುತ್ತಿದೆ. ನೈಸರ್ಗಿಕ ವಿಕೋಪಗಳು ಇಂದು ಪ್ರಪಂಚಾದ್ಯಂತ ಎಲ್ಲಾ ದೇಶಗಳನ್ನು ಬಡಿದೆಬ್ಬಿಸಿವೆ.

ಜನಸಾಮಾನ್ಯರಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಿ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಗೊಳ್ಳುವುದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ನೆಮ್ಮದಿಯ ಬದುಕು ಕಟ್ಟಿಕೊಡುವ ಪ್ರಯತ್ನ ಇಂದು ತುರ್ತಾಗಿ ನಡೆಯಬೇಕಿದೆ. ವಿಶ್ವದ ಜೀವ ವೈವಿಧ್ಯದ ಸಂರಕ್ಷಣೆ, ಪರಿಸರ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ನಮ್ಮ ಪರಿಸರದ ಪುನರುತ್ಥಾನಕ್ಕೆ ನಾವು ಏನು ಮಾಡಬೇಕೆಂಬುದರ ಬಗ್ಗೆ ಚಿಂತನ ಮಂಥನ ನಡೆಸಿ ಸರಿದಾರಿಯಲ್ಲಿ ಪರಿಸರ ಸಂರಕ್ಷಿಸುವ ಕಾರ್ಯ ಈ ಕ್ಷಣದ ಅವಶ್ಯಕತೆಯಾಗಿದೆ.

ಪರಿಸರದ ಅವಿಭಾಜ್ಯ ಅಂಗ ಎನಿಸಿಕೊಂಡಿರುವ ಕಾಡು ನಮ್ಮ ಸ್ವಾರ್ಥಕ್ಕೆ ತುತ್ತಾಗಿ ಬರಡಾಗಿದೆ. ನಮ್ಮ ಬದುಕಿಗೆ, ಉಸಿರಿಗೆ ಅನಿವಾರ್ಯವಾದ ಕಾಡನ್ನು ನಾಶ ಮಾಡುತ್ತಿದ್ದೇವೆ. ಹಚ್ಚ ಹಸಿರು ಕಾನನ ಬದಲಾಗಿ ಇಂದು ಎಲ್ಲೆಡೆ ಕಾಂಕ್ರಿಟ್‌ ಕಾಡುಗಳೇ ನಮ್ಮ ಕಣ್ಣ ಮುಂದಿವೆ. ಭೂಮಿಯಲ್ಲಿರುವ ಸ್ವಾಭಾವಿಕಗಳೆಲ್ಲವೂ ಮಾಯವಾಗಿ ಅಸ್ವಾಭಾವಿಕಗಳೇ ತುಂಬಿಕೊಂಡಿವೆ. ಕೃತಕತೆಯ ನಾಗಾಲೋಟದಲ್ಲಿ ದಿನ ದಿನವೂ ಪರಿಸರ ಮಾಲಿನ್ಯಗೊಳ್ಳುತ್ತಿದೆ. ಒಟ್ಟಿನಲ್ಲಿ ಬುದ್ಧಿ ಜೀವಿ ಎನ್ನುವ ನಾವುಗಳು ಪ್ರಕೃತಿಗೇ ಸವಾಲೆಸೆಯುತ್ತಿದ್ದೇವೆ. ಆದರೆ ಈ ಯುದ್ಧದಲ್ಲಿ ತಾತ್ಕಾಕಲಿವಾಗಿ ಪರಿಸರ ಮಣಿದರೂ ಇದಕ್ಕೆ ಬೆಲೆ ತೆರಬೇಕಾದವರೂ ನಾವೇ.



ಕಾಳಜಿ ಬೇಕು 
ಆದ್ದರಿಂದ ನಮ್ಮನ್ನು ಸಲಹಿದ ಪರಿಸರದ ಬಗ್ಗೆ ನಮಗೂ ಕಾಳಜಿ ಇರಬೇಕು. ಬೇಕಾಬಿಟ್ಟಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಹಾಳುಮಾಡುತ್ತಿದ್ದೇವೆ. ಹಿತಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಅಂತರ್ಜಲದ ವದ್ಧಿಗೆ ಯೋಜನೆಗಳನ್ನು ರೂಪಿಸಿ, ನೀರಿನ ಮೂಲಗಳಾದ ಕೆರೆ, ಬಾವಿ, ಕೊಳ, ನದಿ ಇತ್ಯಾದಿಗಳ ಮಾಲಿನ್ಯವನ್ನು ತಡೆಯಬೇಕು. ಮತ್ತೆ ಕಾಡನ್ನು ಬೆಳೆಸುವತ್ತ ಗಮನ ಹರಿಸಿ, ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆಗೊಳಿಸಬೇಕು. ಪವನ ಶಕ್ತಿ, ಸೌರಶಕ್ತಿ ಮೊದಲಾದ ನೈಸರ್ಕಿಕ ಶಕ್ತಿಯ ಮೂಲಗಳಿಂದ ವಿದ್ಯುಚ್ಛಕ್ತಿ ತಯಾರಿಸಿ ಉಪಯೋಗಿಸಬೇಕು. ಜೈವಿಕ ಗೊಬ್ಬರಗಳನ್ನೇ ಬಳಸಬೇಕು. ಪರಿಸರಕ್ಕೆ ಹಾನಿ ಮಾಡುವ ಚಟುವಟಿಕೆಗಳಿಗೆ ಬ್ರೇಕ್‌ ಹಾಕಬೇಕು. ಜನ ಸಾಮಾನ್ಯರಲ್ಲಿ ಪರಿಸರದ ಕಾಳಜಿಯ ಬಗ್ಗೆ ಅರಿವು ಮೂಡಿಸಿ ನಾವೂ ಅದರಂತೆ ನಡೆಯಬೇಕು. ಇನ್ನಾದರೂ ಎಚ್ಚೆತ್ತು, ಪರಿಸರದ ಮೇಲೆಸಗುವ ಅನೈತಿಕ ಕಾರ್ಯಗಳಿಗೆ ಮಂಗಳಹಾಡಬೇಕು. ಪರಿಸರ ಸ್ನೇಹಿಯಾಗಿ ಬಾಳಬೇಕು.

ವಿಶ್ವ ಪರಿಸರ ದಿನಾಚರಣೆ ಎಂದರೆ ಎಂದಿನಂತೆ ಇಂದು ಒಂದು ದಿನ ಅಂದುಕೊಂಡೇ ನಾವು ಇಷ್ಟು ವರ್ಷ ಕಳೆದಿದ್ದೇವೆ. ಹೆಚ್ಚೆಂದರೆ ಗಿಡ ನೆಡಬೇಕು, ಪರಿಸರ ಕಾಪಾಡಬೇಕು ಅಂತ ಒಂದೆರಡು ಮಾತಾಡಿ ಸುಮ್ಮನಾಗಿ ಬಿಡುತ್ತೇವೆ. ಆದರೆ ಇವತ್ತು ವಿಶ್ವ ಪರಿಸರ ದಿನ ಮಾತ್ರವಲ್ಲ, ಪ್ರಕೃತಿಯೂ ನಮ್ಮಿಂದ ತುಂಬ ಪ್ರಾಮಾಣಿಕವಾದ ಬದ್ಧತೆಯನ್ನು ಬೇಡುತ್ತಿದೆ. ಅದನ್ನು ಪೂರೈಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.


ಮಾರ್ಚ್ 19, 2013

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.... ಗುಬ್ಬಕ್ಕ ಇದು ನಿನ್ನ ದಿನ

ಗುಬ್ಬಚ್ಚಿ ಗೂಡಿನಲ್ಲಿಲ್ಲ! ಹೌದು, ಹಿಂದೆ ಮನೆಯಂಗಳದಲ್ಲಿ, ಫೋಟೋ ಫ್ರೇಮ್ ಹಿಂದೆ, ಪಕ್ಕಾಸಿನ ಸಂದಿನಲ್ಲಿ ಸಂಸಾರ ಹೂಡುತ್ತಿದ್ದ ಗುಬ್ಬಚ್ಚಿಗಳು ಇಂದು ಗೂಡಿನಲ್ಲಿಲ್ಲ.
ಏಕಾಏಕಿ ಪುಟಾಣಿ ಗುಬ್ಬಕ್ಕನ ನೆನಪಾಗಿದ್ದು ಯಾಕೆಂದರೆ, ಇಂದು ಚೀಂವ್ ಗುಡುವ ಗುಬ್ಬಕ್ಕನ ದಿನ. ಮಾರ್ಚ್  20 ರಂದು ಪ್ರತಿ ವರ್ಷ ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಪರಿಸರ ಆರೋಗ್ಯದ ಸೂಚಕವಾದ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗುತ್ತಿರುವ ಬಗ್ಗೆ ಜನಜಾಗತಿ ಮೂಡಿಸುವುದು, ದೈನಂದಿನ ಬದುಕಿನಲ್ಲಿ ಗುಬ್ಬಚ್ಚಿಗಳು ಎದುರಿಸುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿ ಸಾಮುದಾಯಿಕ ಪರಿಹಾರ ಹುಡುಕುವುದು ಈ ಆಚರಣೆಯ ಹಿಂದಿರುವ ಸದುದ್ದೇಶ.
ನಮ್ಮ ಮನೆಗಳ ಗೋಡೆಯಲ್ಲಿ ಕಟ್ಟುಹಾಕಲಾದ ಫೋಟೋಗಳ ಹಿಂದೆ, ಮಹಡಿ ಮನೆ, ಗೋಡೆ -ಪಕ್ಕಾಸುಗಳ ಸಂದುಗಳಲ್ಲಿ, ಅಷ್ಟೇ ಏಕೆ ಮನೆ ಮುಂದಿನ ದಾಸವಾಳ, ಮಂದಾರಪುಷ್ಟ ಮೊದಲಾದ ಗಿಡಗಂಟಿಗಳಲ್ಲಿಯೂ ನೂರಾರು ಸಂಖ್ಯೆಯಲ್ಲಿ ಹುಲ್ಲು, ನಾರುಗಳ ಪುಟ್ಟದಾದ ಗೂಡು ಹೆಣೆಯುತ್ತಿದ್ದ ಗುಬ್ಬಚ್ಚಿ ಈಗಿಲ್ಲವಾಗಿರುವುದು ಪರಿಸರ ಪ್ರೇಮಿಗಳಲ್ಲಿ, ಪಕ್ಷಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.

ಹೊಸ ಮನೆಗಳಲ್ಲಿ ಈ ಹಕ್ಕಿಗಳಿಗೆ ವಾಸಕ್ಕೆ ಯೋಗ್ಯವಾದ ಸ್ಥಳಾವಕಾಶವಿರುವುದಿಲ್ಲ. ಹಿಂದಿನ ಹಳೆಯ ಮನೆಗಳಲ್ಲಿ ಗುಬ್ಬಚ್ಚಿಗಳು ಸ್ಥಳಾವಕಾಶ ನೋಡಿಕೊಂಡು ಗೂಡು ಕಟ್ಟಿಕೊಳ್ಳುತ್ತಿದ್ದವು. ಆದರೆ ಹೊಸ ವಾಸ್ತುಶಿಲ್ಪ ವಿನ್ಯಾಸದ ಮನೆಗಳಲ್ಲಿ ಗುಬ್ಬಚ್ಚಿಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸ್ಥಳಾವಕಾಶವೇ ದೊರೆಯುವುದಿಲ್ಲ. ಕ್ರಿಮಿನಾಶಕಗಳ ವ್ಯಾಪಕ ಬಳಕೆಯಿಂದಾಗಿ ಗುಬ್ಬಚ್ಚಿಗಳು ನಾಶವಾಗುತ್ತಿವೆ. ನಿಸರ್ಗ ಸಂರಕ್ಷಣಾ ಅಂತಾರಾಷ್ಟ್ರೀಯ ಒಕ್ಕೂಟದ ಕೆಂಪು ಪಟ್ಟಿ ವಿಭಾಗದಲ್ಲಿ ಗುಬ್ಬಚ್ಚಿಯೂ ಸೇರಿಸಲ್ಪಟ್ಟಿದೆ.
ಕಳೆದೊಂದು ಒಂದೂವರೆ ದಶಕದಲ್ಲಿ ಮೊಬೈಲ್ ಹಾವಳಿ ಅತಿಯಾಗಿದ್ದು, ಪ್ರವಾಹದಂತೆ ಅವುಗಳ ಬಳಕೆ ಹೆಚ್ಚಾಗುತ್ತಿದೆ. ಈ ಮೊಬೈಲ್ ಟವರ್‌ಗಳಿಂದ ಸೂಸುವ ವಿದ್ಯುತ್‌ ಕಾಂತೀಯ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ರೂಪುಗೊಳ್ಳದಂತೆ ಮಾಡುತ್ತಿವೆ. ಕೆಲವು ವಿಜ್ಞಾನಿಗಳ ಪ್ರಕಾರ ಸೀಸರಹಿತ ಪೆಟ್ರೋಲ್‌ ಬಳಕೆಗೆ ಬಂದನಂತರ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಿದೆ. ಮೊದಲು ಸೀಸಯುಕ್ತ ಪೆಟ್ರೋಲ್‌ ಬಳಕೆಯಲ್ಲಿತ್ತು. ಈ ಪೆಟ್ರೋಲ್‌ ಬಳಕೆಯಿಂದ ಸೀಸ ಮಾಲಿನ್ಯ ಹೆಚ್ಚಾಗಿ ಮನುಷ್ಯನಿಗೆ ತೊಂದರೆಯಾಗುತ್ತಿತ್ತು. ಈಗ ಸೀಸಕ್ಕೆ ಬದಲಾಗಿ ‘ಮಿಥೈಲ್‌’ ಎಂಬ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಇದರಿಂದ ಉಂಟಾಗುವ ಮಾಲಿನ್ಯ ಗುಬ್ಬಚ್ಚಿ ಮರಿಗಳಿಗೆ ಅಗತ್ಯವಾಗಿರುವ ಕೀಟಗಳನ್ನು ಕೊಲ್ಲುತ್ತದೆ. ಬೆಳೆದ ಗುಬ್ಬಚ್ಚಿಗಳಿಗೆ ದವಸ ಧಾನ್ಯಗಳೇ ಸಾಕು. ಆದರೆ ಬೆಳೆಯುವ ಮರಿಗಳಿಗೆ ಪ್ರೋಟೀನ್‌ಯುಕ್ತ ಕೀಟಗಳೇ ಬೇಕು. ಈ ಕೀಟಗಳನ್ನು ಸೀಸರಹಿತ ಪೆಟ್ರೋಲ್‌  ಹೊಗೆ ಉಸಿರುಗಟ್ಟಿಸುವುದರಿಂದ ಮರಿಗಳು ಪೌಷ್ಟಿಕ ಆಹಾರವಿಲ್ಲದೆ ಸಾಯುತ್ತವೆ.

ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಹಕ್ಕಿಯಲ್ಲ. ಅದು ಸಂಘಜೀವಿ. ಜನನಿಬಿಡತೆ ಯಾವತ್ತೂ ಗುಬ್ಬಚ್ಚಿಗೆ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಪುಟ್ಟ ನಿರುಪದ್ರವಿ ಹಕ್ಕಿಯದು. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಸದ್ಯ ನಮ್ಮಿಂದ ದೂರವಾಗಿರುವ ಗುಬ್ಬಕ್ಕನನ್ನು ಹತ್ತಿರ ಕರೆಯಬೇಕಾದರೆ ಹೀಗೆ ಮಾಡ ಬಹುದು.
ಕೃತಕ ಗುಬ್ಬಚ್ಚಿ ಗೂಡುಗಳನ್ನು ಮನೆಗಳಲ್ಲಿ, ಮನೆಯೆದುರಿನ ಮರಗಳಲ್ಲಿ ತೂಗು ಹಾಕುವುದು, ಮನೆಯ ಎದುರು ಅಥವಾ ತಾರಸಿ ಮೇಲೆ ತೊಟ್ಟಿಯಲ್ಲಿ ನೀರಿಡುವುದು, ಸಣ್ಣ ಪ್ರಮಾಣದಲ್ಲಿ ಸಣ್ಣ ಗಾತ್ರಕ್ಕೆ ಪುಡಿ ಮಾಡಿದ ಅಕ್ಕಿ-ಕಾಳುಗಳನ್ನು ಪ್ಲೇಟುಗಳಲ್ಲಿ ಇಡುವುದು. ಮನೆಯೆದುರು ಗಿಡ-ಮರಗಳನ್ನು ಬೆಳೆಸುವುದು, ನಗರಗಳಲ್ಲಿ ಅಲ್ಲಲ್ಲಿ ಪಾರ್ಕುಗಳನ್ನು ನಿರ್ಮಿಸುವುದು. ಹೊಸ ವಿನ್ಯಾಸದಲ್ಲಿ ಮನೆಗಳನ್ನು ಕಟ್ಟುವಾಗಲೂ ಗುಬ್ಬಚ್ಚಿಗಾಗಿಯೇ ಒಂದಿಷ್ಟು ಸ್ಥಳವನ್ನು ಕಾದಿರಿಸುವುದು.
 ನಗರ ಪ್ರದೇಶದಲ್ಲಿ ಅಲಲ್ಲಿ ಮಾತ್ರ ಗುಬ್ಬಚ್ಚಿಗಳು ಕಂಡು ಬರುತ್ತಿವೆ. ಹಳ್ಳಿ ಮನೆಗಳಲ್ಲೂ ಗುಬ್ಬಚ್ಚಿ ಕಲರವ ಅಪರೂಪವಾಗಿ ಬಿಟ್ಟಿದೆ. ನಾವು ಚಿಕ್ಕವರಾಗಿದ್ದಾಗ ಗುಬ್ಬಚ್ಚಿಯ ಜೊತೆಗೆ ಕಣ್ಣಾ ಮುಚ್ಚಾಲೆಯಾಡಿದ್ದೇವೆ, ಊಟ ಮಾಡಬೇಕಾದರೆ ಗುಬ್ಬಚ್ಚಿಗೂ ನಾಲ್ಕು ಅಗಳು ಹಾಕಿ ಸಂಭ್ರಮಿಸಿದ್ದೇವೆ, ಗುಬ್ಬಕ್ಕ ಗೂಡಿನಲ್ಲಿಲ್ಲದಾಗ ಅದರ ಮನೆಯನ್ನೆಮ್ಮೆ ಕಳ್ಳನಂತೆ ಹೊಕ್ಕು ತನಿಖೆ ಮಾಡಿದ್ದೇವೆ! ಆದರೆ ಈಗಿನ ಬಹುತೇಕ ಮಕ್ಕಳಿಗೆ ಗುಬ್ಬಕ್ಕನ ಪರಿಚಯವೇ ಇರದು, ಅವರಿಗೆ ಗುಬ್ಬಿಯೆಂದರೆ ಟ್ವಿಟ್ಟರ್‌ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.
ಸ್ವಸ್ಥ ಪರಿಸರ ಹಾಗೂ ಅದರಲ್ಲಿ ಸ್ವಚ್ಛಂದವಾಗಿ ವಿಹರಿಸುವ ಗುಬ್ಬಕ್ಕನನ್ನು ನಮ್ಮ ಮುಂದಿನ ಪೀಳಿಗೆಗೂ ದಾಟಿಸಲು ಸಾಮುದಾಯಿಕವಾಗಿ ಕೆಲಸ ಮಾಡಲೇಬೇಕು. ಎಲ್ಲೋ ಒಂದು ಮೂಲೆಯಲ್ಲಿ ಒಬ್ಬಿಬ್ಬರು ಈ ನಿಟ್ಟಿನಲ್ಲಿ ಕಾರ್ಯಪ್ರವತರಾದರೆ ಇಷ್ಟು ದೊಡ್ಡ ಜಗತ್ತಿನಲ್ಲಿ, ಬೇಡ ದೇಶದಲ್ಲಿಯಾದರೂ ಮರಿ ಗುಬ್ಬಚ್ಚಿಯನ್ನು ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ಮತ್ತೆ ನಮ್ಮ ಮನೆಯ ಸುತ್ತ ಮುತ್ತಲೂ ಗುಬ್ಬಕ್ಕ ಚೀಂವ್ ಗುಡಬೇಕಾದರೆ ಮರಳಿ ಅದನ್ನು ಗೂಡಿಗೆ ಕರೆಯಲೇ ಬೇಕು. ಇದಕ್ಕಾಗಿ ಕೇವಲ ಇವತ್ತು ಒಂದು ದಿನ ಎಚ್ಚರಗೊಂಡರೆ ಸಾಲದು ವರ್ಷವಿಡೀ ಗುಬ್ಬಕ್ಕನ ರಕ್ಷಣೆಗೆ ಮುಂದಾಗಬೇಕು.


ಗುಬ್ಬಿಗಳ ಕಣ್ಮರೆಗೆ ಪ್ರಮುಖ ಕಾರಣಗಳು
* ಮೊಬೈಲ್  ಟವರ್ ಗಳ ಪ್ರಬಲ ತರಂಗಾಂತರಗಳು.
* ಸೀಸ ರಹಿತ ಪೆಟ್ರೋಲ್‌ ಬಳಕೆ
* ಕ್ರಿಮಿ-ಕೀಟಗಳ ನಾಶಕ್ಕೆ ಕೀಟನಾಶಕ ಬಳಕೆ.
* ಕಟ್ಟಡಗಳ ನೂತನ ವಿನ್ಯಾಸಗಳಿಗೆ ಹೊಂದಿಕೊಳ್ಳಲು ಅಸಾಧ್ಯವಾಗಿರುವುದು.
* ಕಟ್ಟಡಗಳಲ್ಲಿ ಗಾಜುಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದು.
* ಮನೆ-ಅಡುಗೆ ಮನೆಗಳಲ್ಲಿ ಆಗಿರುವ ಬದಲಾವಣೆ, ಶುಚಿತ್ವ ಹೆಚ್ಚಿರುವುದು.
* ಪರಿಸರ ನಾಶ, ನಗರಗಳಲ್ಲಿ ಇದ್ದ ಮರ-ಗಿಡಗಳು ಕೂಡ ಮರೆಯಾಗುತ್ತಿರುವುದು.
* ಗೂಡು ಕಟ್ಟಲು ಬೇಕಾದ ಸರಕುಗಳು ಸಿಗದೇ ಇರುವುದು.

ಮೇ 6, 2012

ಗರಿಗಳ ಮರೆಯಲ್ಲಿ ಸೂಪರ್ ಮೂನ್

ಸೌರ ಮಂಡಲದಲ್ಲಿ ಮೇ 5 ಮತ್ತು 6 ರಂದು ಕೌತುಕ ಕಾದಿತ್ತು. ಚಂದಿರ ದೊಡ್ಡ ಗಾತ್ರದಲ್ಲಿ ಹಾಗೂ ಪ್ರಕರವಾಗಿ ಕಾಣಿಸುತ್ತಿದ್ದ.
ಚಂದ್ರ ಭೂಮಿಗೆ 3,56,955 ಕಿ,ಮೀ. ಹತ್ತಿರದಲ್ಲಿ ಕಾಣಿಸುತ್ತಿದ್ದ, ಖಗೋಲ ಶಾಸ್ತ್ರಜ್ಞರ ಪ್ರಕಾರ ಇದು ಸಂಭವಿಸಿರುವುದು 18 ವರ್ಷಗಳ ಬಳಿಕವಂತೆ.






 ಶುಭ್ರ ಬಾನಿನಲ್ಲಿ ನಳ ನಳಿಸುತ್ತಿದ್ದ ಚಂದ್ರನನ್ನ ತೆಂಗಿನ ಗರಿಗಳ ಮರೆಯಲ್ಲಿ ಸೆರೆ ಹಿಡಿದಿದ್ದೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವವನ್ನು ಇಲ್ಲಿ ಕೊಟ್ಟಿದ್ದೇನೆ.  

ಏಪ್ರಿಲ್ 29, 2012

ಮಲ್ಯಾಡಿಯಲ್ಲಿ ಒಂದು ಸುತ್ತು

ಇತ್ತೀಚೆಗೆ ಕುಂದಾಪುರ ಸಮೀಪದ ತೆಕ್ಕಟ್ಟೆಯ ಮಲ್ಯಾಡಿಗೆ ಹೋಗಿದ್ದೆ. ಅಲ್ಲಿ ಅನಧಿಕೃತ ಪಕ್ಷಿಧಾಮವೊಂದಿದೆ. ಅನಧಿಕೃತ ಅಂದರೆ ಅದು ಅರಣ್ಯ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ. ಸುಮಾರು 20-25 ಎಕರೆ ಖಾಸಗಿ ಜಮೀನಿನಲ್ಲಿ ಈ ಪಕ್ಷಿಧಾಮ ಹರಡಿಕೊಂಡಿದೆ. ಪ್ರತೀ ವರ್ಷ ಇಲ್ಲಿ ಸುಮಾರು 12-15 ಜಾತಿಯ ವಿದೇಶದ ವಲಸೆ ಹಕ್ಕಿಗಳು ಬರುತ್ತವೆ. ಸ್ಥಳೀಯವಾಗಿ ಸುಮಾರು 40ಕ್ಕೂ ಅಧಿಕ ಪಕ್ಷಿಗಳನ್ನು ಇಲ್ಲಿ ಕಾಣಬಹುದು.
ಉಡುಪಿ ಜಿಲ್ಲೆಯಲ್ಲಿ ಹೆಂಚಿನ ಕಾರ್ಖಾನೆಗಳಿಗಾಗಿ ಕೊಜೆ (ಆವೆ)ಮಣ್ಣು ತೆಗೆಯುವುದರಿಂದ, ಈ ಕೊಚೆ ಹೊಂಡಗಳಲ್ಲಿ ನೀರು ನಿಂತು ಈ ಪ್ರದೇಶದಲ್ಲಿ ಕೆರೆಗಳಾಗಿ ಪರಿವರ್ತಿತಗೊಂಡಿವೆ. ಈ ಹೊಂಡಗಳಲ್ಲಿ ವರ್ಷಪೂರ್ತಿ ನೀರು ನಿಲ್ಲುವುದರಿಂದ ಇಲ್ಲಿ ಪಕ್ಷಿಗಳು ಆಗಮಿಸುವುದರಿಂದ ಮಲ್ಯಾಡಿ ಪಕ್ಷಿಧಾಮವಾಗಿ ಮಾರ್ಪಾಡುಗೊಂಡಿದೆ.
ಇಲ್ಲಿ ಪಕ್ಷಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಪಕ್ಷಿಧಾಮಕ್ಕೆ ಕಾಯಕಲ್ಪಬೇಕಿದೆ. ಕಳೆದ ಸುಮಾರು ವರ್ಷಗಳಿಂದ ಈ ಕೊಜೆ ಹೊಂಡಗಳಲ್ಲಿ ಅಂತರಗಂಗೆ ಕಳೆಗಿಡಬೆಳೆದಿರುವುದರಿಂದ ಇಲ್ಲಿಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ ಈ ಪರಿಸರದಲ್ಲಿ ಹಿಂದೆ ಮನುಷ್ಯ ಓಡಾಟ ಕಡಿಮೆ ಇತ್ತು. ಈಗ ಜನವಸತಿ ಹೆಚ್ಚುತ್ತಿರುವುದರಿಂದಲೂ ಹಕ್ಕಿಗಳು ಇಲ್ಲಿಂದ ವಿಮುಖವಾಗುತ್ತಿವೆ.
ಅದೇನೇ ಇರಲಿ ಮೊನ್ನೆ ನಾನು ಹೋದಾಗ ಅಲ್ಲಿ ಒಂದಷ್ಟು ಹಕ್ಕಿಗಳು ಸ್ವಾಗತಿಸಿದವು. ಅವುಗಳಲ್ಲಿ ಕೆಲವನ್ನು ಇಲ್ಲಿ ದಾಖಲಿಸಿದ್ದೇನೆ.
















ಏಪ್ರಿಲ್ 15, 2012

ಕರಾವಳಿಯಲ್ಲಿ ಸೂರ್ಯಾಸ್ತ


ಮೂಡಣ ಮಲೆಯಲ್ಲಿ ಸೂರ್ಯ ಮೆಲ್ಲನೇ ಏರಿ ಬರುವ ಚಂದವನ್ನು ಸವಿಯುವುದೇ ಒಂದು ಹಿತವಾದರೆ, ಇಳಿ ಹೊತ್ತಿನಲ್ಲಿ ಎಲ್ಲೆಡೆ ಕೆಂಬಣ್ಣವನ್ನು ಚೆಲ್ಲುತ್ತಾ ಪಡುವಣದ ನೀಲ ಕಡಲಿನೊಂದಿಗೆ ಲೀನವಾಗುವಾಗ ಕ್ಷಣಗಳು ಇನ್ನೊಂದು ಅನುಭವ.


ಜಿಲ್ಲೆಯುದ್ದಕ್ಕೂ ಸಮುದ್ರ ಕಿನಾರೆ, ಜೊತೆಗೆ ದಕ್ಷಿಣದಿಂದ ಉತ್ತರಕ್ಕೆ ಸಾಗುವವರೆಗೂ ನದಿಗಳಿಗೇನೂ ಕೊರತೆ ಇಲ್ಲ. ಮಂಗಳೂರಿನಿಂದ ಜಿಲ್ಲೆಗೆ ಪ್ರವೇಶ ಆಗುವಾಗ ವೊದಲಾಗಿ ಶಾಂಭವಿ ತನ್ನ ಅಂಕು ಡೊಂಕಿನ ವೈಯ್ಯಾರವನ್ನು ಆರಂಭಿಸುತ್ತಾಳೆ. ಜಿಲ್ಲೆಯ ಉತ್ತರ ಗಡಿಯ ಶಿರೂರು ತಲುವುವಾಗ ಪಶ್ಚಿಮ ಘಟ್ಟದಲ್ಲಿ ಜನ್ಮವೆತ್ತಿ ಕಡಲು ಸೇರುವ ತವಕದಲ್ಲಿ ಭಿನ್ನಾಣದಿಂದಲೇ ಓಡೋಡಿ ಬರುವ ಸೌಪರ್ಣಿಕ. ಈ ನಡುವೆ ಪಾಂಗಾಳ, ಉದ್ಯಾವರ, ಸುವರ್ಣಾ, ಸೀತಾ, ಚಕ್ರಾ.... ಹೀಗೆ ಇನ್ನಷ್ಟು ನದಿಗಳ ಹರಿವು. ಸುಮಾರು ೬೧ ಮೈಲು ಉದ್ದಕ್ಕೆ ಮೈಚಾಚಿಕೊಂಡು ಮಲಗಿರುವ ಕಡಲತೀರ. ಗುಡ್ಡ-ಕಾಡು, ಬಯಲು, ಗದ್ದೆ, ತೋಟ ಎತ್ತ ನೋಡಿದರೂ ಹಸುರಿಗೂ ಕೊರತೆಯಿಲ್ಲ. ಇವುಗಳ ಮೇಲೆಲ್ಲಾ ಭಾಸ್ಕರ ತನ್ನ ಬೆಳಕನ್ನು ಚೆಲ್ಲುತ್ತಾ ಎಲ್ಲೋ ಎದ್ದು, ಇನ್ನೆಲ್ಲೋ ಮುಳುಗಿ, ಮತ್ತೆಲ್ಲೋ ಪ್ರತ್ಯಕ್ಷವಾಗುತ್ತಾ ಸಂಜೆ ತನ್ನ ಹೊನ್ನ ಕಿರಣಗಳನ್ನು ಸೂಸುತ್ತಿದ್ದರೆ ಅದೊಂಥರಾ ಚೆನ್ನ.


ಉಡುಪಿಯಲ್ಲಿ ಕಂಡ ಸೂರ್ಯಾಸ್ತ ಅಥವಾ ಸೂರ್ಯೋದಯ ಪಕ್ಕದ ಮಲ್ಪೆಗೆ ಹೋದರೆ ಕಾಣಸಿಗದು. ಮಲ್ಪೆಯದು ಕೆಮ್ಮಣ್ಣುವಿನಲ್ಲಿ ಊಹುಂ ಸಾಧ್ಯವಿಲ್ಲ. ಒಂದೊಂದು ಕಡೆಯಲ್ಲಿಯೂ ಸೂರ್ಯಾಸ್ತ ನೋಡುವುದು ಅದ್ಭುತ. ಇಲ್ಲಿ ಸೂರ್ಯೋದಯದ ವಿಹಂಗಮ ನೋಟವನ್ನು ಕಾಣುವುದು ಕಷ್ಟ. ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಡೆಗಳಲ್ಲಿ ನೋಡಬಹುದು. ಆದರೆ ಸೂರ್ಯಾಸ್ತ ಮಾತ್ರ ಎಲ್ಲೆಂದರಲ್ಲಿ ಜನರ ಮನಸಿಗೆ ಮುದ ನೀಡುತ್ತದೆ.

ಪಶ್ಚಿಮ ಘಟ್ಟದ ಆಗುಂಬೆಯಿಂದ, ಅತ್ತ ಹೊಸನಗರದಿಂದ ಉಡುಪಿಗೆ ಬರುವಾಗ ಬಾಳೆಬರೆ ಘಾಟ್‌ನಿಂದ ಆದಿತ್ಯ ಕಡಲಿನೊಂದಿಗೆ ಒಂದಾಗಲೂ ಹವಣಿಸುವುದನ್ನು ಕಾಣುವುದೇ ಸೊಗಸು. ಇನ್ನು ನದಿ ತೊರೆಗಳಿದ್ದಲ್ಲಿ ಸೂರ‍್ಯ ಮುಳುಗುವ ಯಾವತ್ತೂ ಸೌಂದರ್ಯವನ್ನು ಸವಿಯಲು ಬೋರ್ ಅನಿಸುವುದೇ ಇಲ್ಲ. ಮಲ್ಪೆ ಸಮೀಪದ ತೋನ್ಸೆಪಾರ್‌ನಲ್ಲಿ ಸೂರ್ಯಾಸ್ತ ಅದೊಂದು ಅಪೂರ್ವ ಕ್ಷಣ.


ಈ ಪ್ರಕೃತಿ ವೈಭವವನ್ನು ಕಣ್ಣು ಕೋರೈಸುವಂತೆ ಮಾಡಲು ಉದಯಾಸ್ತಮಾನ ಕಾಲದಲ್ಲಿ ಸೂರ್ಯ ಬೀರುವ ಸಪ್ತವರ್ಣ ಬದಲಾಗುತ್ತ ಒಮ್ಮೆ ಹಗಲಾಗಿ, ಮತ್ತೊಮ್ಮೆ ಕತ್ತಲಾಗಿ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ಒಂದೊಂದು ಅನುಭವವೂ ಮನದಲ್ಲಿ ಅಚ್ಚಳಿಯದ ವಿಸ್ಮಯ ಮೂಡಿಸುತ್ತದೆ. ಕರಾವಳಿಯಲ್ಲಿ ಸೂರ್ಯೋದಯ, ಸೂರ್ಯಾಸ್ತವನ್ನು ನೋಡುವುದೇ ಸೊಗಸು.



ಏಪ್ರಿಲ್ 8, 2012

ಮನದೊಳಗೆ ಏಕೋ ಏನೋ ದುಗುಡ

ಪ್ರಿಯ ಗೆಳೆಯಾ,
ಯಾಕೋ ಗೊತ್ತಿಲ್ಲ ಇಂದು ಮನಸ್ಸು ಭಾರ ಎನಿಸುತ್ತಿದೆ. ಸದಾ ಹೀಗೆ ನಗುತ್ತಿರು ಎಂದು ನನ್ನ ಮುಖದಲ್ಲಿ ಹೊಳೆಯುವ ನಗು ಕಂಡು ಹೇಳಿದ್ರಿ. ಆದರೆ ಆ ನಗು ಕಳೆದ ನಾಲ್ಕೈದು ದಿನಗಳಲ್ಲಿ ಅಡ್ರೆಸ್ ಇಲ್ಲದೇ ಮಾಯವಾಗಿದೆ. ಮನದ ತುಂಬಾ ದುಗುಡ ತುಂಬಿದೆ. ಪ್ರೀತಿ ಮಾತುಗಳಿಗಾಗಿ ಮನಸು ಹಾತೊರೆಯುತ್ತಿದೆ. ನಿಮ್ಮ ಒತ್ತಡದಲ್ಲಿ ನೀವು ನನ್ನ ಕಡೆಗೆ ಗಮನ ಕೊಡಲು ಸಾಧ್ಯವಾಗೋಲ್ಲ. ಈ ವಿಚಾರದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಮನಸು ಮಾತ್ರ ನಿಮಗಾಗಿ ನಿಮ್ಮ ಪ್ರೀತಿಗಾಗಿ ಹಂಬಲಿಸುತ್ತಿದೆ. 
ನಿಮ್ಮಂತೆ ಸ್ವಚ್ಛಂದ ಪ್ರೀತಿಯನ್ನು ಇನ್ನಾರು ಕೊಡಲು ಸಾಧ್ಯವಿಲ್ಲ ಕಂದಾ... ಹಾಗಂತೆ ನಿಮ್ಮ ಪ್ರೀತಿಗೆ ಪರ್ಯಾಯವನ್ನು ಹುಡುಕುತ್ತಿಲ್ಲ. ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನದಾಗ ಹಾಗೆನಿಸುತ್ತಿದೆ. ನನ್ನ ಜೊತೆಗೇ ಇದ್ದು, ನನ್ನ ಪ್ರೀತಿಗಾಗಿ ಹಂಬಲಿದ ವ್ಯಕ್ತಿಯೊಬ್ಬರಿಗೆ ನಾನು ಆತ್ಮೀಯತೆಯಿಂದ ಅಂದರೆ ನಿಮಗೆ ಗೊತ್ತಿದ್ದಂತೆ ಪ್ರೀತಿಯಿಂದಲೇ ಕಾಣುತ್ತಿದ್ದೆ. ಇನ್ನೊಬ್ಬರಿಗೆ ಪ್ರೀತಿ ಬೇಕು ಎಂದು ಹಂಬಲಿಸುವಾಗ ನೀಡ ಬೇಕಲ್ವೇ? ಆದರೆ ನೀವು ಹೇಳಿದ ಮಾತೀಗ ನೆನಪಿಗೆ ಬರುತ್ತಿದೆ ಗೆಳೆಯಾ, 'ಪ್ರೀತಿಯನ್ನ ಧಾರೆ ಎರೆ. ಆದರೆ ನಿನ್ನ ಪ್ರೀತಿಗೆ ಯಾರು ಆರ್ಹರು ಎಂದು ಮೊದಲು ತಿಳಿ' ಎಂದು ನೀವು ಸದಾ ಎಚ್ಚರಿಸುತ್ತಲೇ ಇದ್ರಿ. ನೀವು ಹೇಳಿದ ಮಾತು ನಿಜ ಎಂದು ಇವತ್ತು ನನಗೆ ಈಗ ಅರ್ಥವಾಗುತ್ತಿದೆ. ಪ್ರೀತಿಗೆ ಅನರ್ಹವಾದರಿಗೆ ಮಾತ್ರ ಯಾರಿಗೆ ಪ್ರೀತಿಯ ಅಗತ್ಯವಿಲ್ಲವೋ ಅವರಿಗೂ ಪ್ರೀತಿಯನ್ನು ಹಂಚ ಬಾರದು ಎಂದು ನಿರ್ಧರಿಸಿದ್ದೇನೆ ಕಂದಾ.
ಹ್ಞಾಂ ಕಳೆದ ನಾಲ್ಕೈದು ದಿನಗಳಿಂದ ನಾನು ತುಂಬಾ ರಿಸರ್ವ್ಡ್ ಆಗಿದ್ದೀನಿ. 'ಒಂದು ನಿಮಿಷಕ್ಕೆ ಎಷ್ಟು ಮಾತಾಡ್ತಿ' ಎಂದು ನೀವು ಹಿಂದೆ ಹೇಳಿದ ಹಾಗೇ ಈಗ ನನ್ನ ಕೇಳುವುದಿಲ್ಲ. ಹಿಂದೆ ನನ್ನ ನೋವನ್ನು ಮುಚ್ಚಿಡ್ತಾ ಇದ್ದೆ ಪುಟ್ಟ. ಆದ್ರೆ ಈಗ ಅದನ್ನು ಅದುಮಿಡ್ತಾ ಇದ್ದೀನಿ. ನನ್ನ ನೋವು ಯಾರಿಗೂ ತಿಳೀಬಾರದು ಎಂದು ತುಂಬಾ ಮಾತಾಡ್ತಾ ಇದ್ದೆ. ಈಗ ಎಲ್ಲಿ ಮಾತಾಡಿದ್ರೆ ನೋವು ಕಟ್ಟೆ ಒಡೆದು ಎಲ್ಲರಿಗೂ ಗೊತ್ತಾಗುತ್ತೆ ಎನ್ನೋ ಭಯ ಕಾಡ್ತಾ ಇದೆ. ಅದಕ್ಕೆ ಮೌನದ ಒಡವೆಯನ್ನು ಧರಿಸಿದ್ದೇನೆ. ನನಗೆ ಗೊತ್ತು, 'ನಿಂಗೆ ಒಡವೆಯ ಅವಶ್ಯಕತೆ ಇಲ್ಲ ಕಣೆ, ನೀನು ಮೊದಲಿನಂತಿದ್ದರೇ ಚೆನ್ನ, ನನ್ನ ಚಿನ್ನ' ಎಂದು ನೀವು ಹೇಳುತ್ತಿದ್ದರೇ ನಾನು ಏನು ಮಾಡಬೇಕು ನನಗೇ ತಿಳಿಯುವುದಿಲ್ಲ. 
ನನಗೆ ಏನೂ ಬೇಡ, ನಿಮ್ಮ ಸವಿ ನೆನಪುಗಳೊಂದಿಗೆ ಈ ಸಮಾಜದಿಂದಲೇ ದೂರ ಸರಿದು, ಏಕಾಂಗಿ ಆಗಿರಬೇಕು ಅದೆಷ್ಟೋ ಬಾರಿ ಯೋಚಿಸಿದ್ದಿದೆ. ಮತ್ತೆ 'ನಾನೂ ಬೇಡ್ವಾ ನಿಂಗೆ' ಎಂದು ಕೇಳ್ಬೇಡಿ. ಯಾಕೆಂದರೆ, ನಾನೂ ಭೂಮಿಗೆ ಭಾರ, ನನ್ನನ್ನು ನಂಬಿರುವವರು ಯಾರೂ ಇಲ್ಲ. ನಾನಾಯ್ತು ನನ್ನ ಕೆಲಸ ಆಯ್ತು ಎಂದಿರುವವಳು ನಾನು. ಆದ್ರೆ ನಿಮಗೆ ಹಾಗಲ್ಲ ಅಲ್ವಾ? ಪ್ರೀತಿಯ ಸಂಸಾರ, ಅದರೊಂದಿಗಿನ  ನೋವು ನಲಿವು, ಸುಖ ದುಃಖ ಎಲ್ಲವೂ ಇದೆ. ಕತ್ತಲೆಯಾದಾಗ ನಾನು ಬರಲಿಲ್ಲ ಎಂದು ನನಗಾಗಿ ಕಾಯುವ ಜೀವ ಇಲ್ಲ. ಆದರೆ ಸ್ವಲ್ಪ ತಡವಾದರೂ ನಿಮಗಾಗಿ, ನಿಮ್ಮ ಬರುವಿಕೆಗಾಗಿ ದಾರಿ ನೋಡುವ ನಾಲ್ಕು ಜೀವಗಳು ನಿಮ್ಮ ಮನೆಯಲ್ಲಿವೆ ಕಂದಾ. ಅವುಗಳನ್ನೆಲ್ಲಾ ಬಿಟ್ಟು ನನ್ನ ಜೊತೆ ಬನ್ನಿ ಎಂದು ಯಾವ ಬಾಯಿಯಿಂದ ಹೇಳಲಿ. ಆ ಅಧಿಕಾರವೂ ನನಗಿಲ್ಲ. ಅದಕ್ಕೇ ಯಾರಿಗೂ ತೊಂದರೆ ಕೊಡದೇ ನಾನೇ ದೂರ ನಡೆಯುತ್ತೇನೆ. ನಾನು ಸದಾ ಪ್ರೀತಿಸುವ ಪ್ರಕೃತಿ, ಹಸಿರು, ಗುಡ್ಡ- ಕಾಡು ಎಲ್ಲವೂ ನನ್ನೊಂದಿಗಿರುತ್ತದೆ. ನನ್ನ ಪ್ರೀತಿಯನ್ನವು ಧಿಕ್ಕರಿಸುವುದಿಲ್ಲ!
ಇಂತಿ ನಿಮ್ಮೊಗೊಬ್ಬಳು
ಪ್ರಿಯ ಗೆಳತಿ

ಡಿಸೆಂಬರ್ 31, 2011

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯ....!!!


ಶನಿವಾರ ರಾತ್ರಿ ಎಲ್ಲ ಕೆಲಸ ಮುಗಿಸಿ ಸುಮಾರು ಗಂಟೆ ೧೧.೩೫ ಆಗಿರಬಹುದು, ನಾಳೆ ಬೇಗ ಏಳ ಬೇಕಲ್ಲ ಎಂದು ಬೆಳಗ್ಗಿನ ಕಾರ್ಯಕ್ರಮ ಇಟ್ಟುಕೊಂಡವರನ್ನು ಶಪಿಸುತ್ತಲೇ ಮಲಗಿದ್ದೆ. ಇನ್ನೇನ್ನು ನಿದ್ದೆ ಹತ್ತಿತು ಎನ್ನುವಾಗ ಪಕ್ಕದಲ್ಲಿದ್ದ ಮೊಬೈಲು ರಿಂಗಾಯಿತು. ಕಾಲ್ ರಿಸೀವ್ ಮಾಡಿದರೆ ಹ್ಯಾಪಿ ನೀವ್ ಈಯರ್ ಅಂತ ಶುಭಾಶಯ ಹೇಳಿದ್ದು ನನ್ನ ಪರಿಚಯದವರು. ಅದಾದ ನಂತರ ಏಳೆಂಟು ಕಾಲ್‌ಗಳು ಅದೇ ಕಾರಣಕ್ಕೆ ಬಂದಿದ್ದವು. ಅವರೆಲ್ಲಾ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನನ್ನ ಆತ್ಮೀಯ ವಂದನೆಗಳು. ಅವರು ತಪ್ಪು ಅಂತ ನಾನು ಸುತರಾಂ ಹೇಳುತ್ತಿಲ್ಲ, ಆದರೆ ನಾನು ಚಿಕ್ಕಂದಿನಿಂದ ನಂಬಿ ಬಂದ ವಿಷಯವನ್ನು ಹೇಳುತ್ತಿದ್ದೇನೆ ಅಷ್ಟೇ.
ನಿನ್ನೆಗೆ ೨೦೧೧ ಇಸವಿ ಕಳೆಯಿತು, ಇವತ್ತಿಗೆ ೨೦೧೨. ಇನ್ನು ೩೬೫ ದಿನಗಳು ೨೦೧೨ ಇಸವಿಯಲ್ಲಿ. ಅಂದರೆ ನಿನ್ನೆಗೆ ಮತ್ತು ಇವತ್ತಿಗೆ ಬರೀ ಗೋಡೆಯಲ್ಲಿ ಗಾಳಿಗೆ ಹಾರಾಡುವ ಕ್ಯಾಲೆಂಡರ್‌ನಲ್ಲಿ ಮಾತ್ರ ಬದಲಾವಣೆ. ಈ ಸುಂದರ ಪ್ರಕೃತಿಯಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ. ಅಂದ ಮೇಲೆ ಇದನ್ನು ಹೊಸ ವರ್ಷ ಎಂದು ಹೇಗೆ ಹೇಳುವುದು? ನಾವು ಭಾರತೀಯರಾಗಿ ಭಾರತದ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನೇ ಹೊಸ ವರ್ಷವನ್ನಾಗಿ ಆಚರಿಸಬೇಕು, ಒಪ್ಪಿಕೊಳ್ಳಬೇಕು ಎನ್ನುವ ಮಾತು ಒತ್ತಟ್ಟಿಗಿರಲಿ. ಅಷ್ಟು ದೊಡ್ಡ ವಿಷಯವನ್ನು ಮಾತನಾಡಲು ನಾನಿನ್ನೂ ಚಿಕ್ಕವಳು. ಆದರೆ ಸದಾ ಸ್ವಚ್ಛಂದ ಪ್ರಕೃತಿಯನ್ನು ಇಷ್ಟ ಪಡುವ ನಾನು ಅದರೊಂದಿಗೆ ಬೆಳೆದವಳು. ಈ ಪ್ರಕೃತಿಯಲ್ಲಿ ಬದಲಾವಣೆಯಾಗುವ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷ ಎನ್ನುತ್ತೇನೆ. ಈ ಸಮಯದಲ್ಲಿ ಬೀಸುವ ತಣ್ಣನೆ ಹವಾ.... ಗಿಡ ಮರಗಳ ತುಂಬಾ ಬಿಟ್ಟಿರುವ ಬಣ್ಣ ಬಣ್ಣದ ಹೂವು, ಎಲೆಗಳನ್ನೆಲ್ಲಾ ಉದುರಿಸಿ ಆಗತಾನೆ ಕವಲೊಡೆದ ಎಳೆ ಚಿಗುರು ಇದೆಲ್ಲವೂ ವಸುಂಧರೆಯನ್ನು ಹೊಸ ವರ್ಷಕ್ಕೆ ಅಣಿಗೊಳಿಸುತ್ತದೆ ಅಲ್ಲವೇ? 
ಇಷ್ಟೆಲ್ಲಾ ಖುಷಿಯ ವಿಷಯಗಳಿರುವಾಗ ಕೇವಲ ಗೋಡೆ ಮೇಲಿರುವ ಕ್ಯಾಲೆಂಡರ್ ಬದಲಾಗುವ ಈ ಹೊಸ ವರ್ಷವನ್ನು ಆಚರಿಸುವುದು ತರವೇ? ಪ್ರಕೃತಿಯ ಮಕ್ಕಳಾದ ನಾವು ಅದನ್ನು ಪೂಜಿಸಿ, ಕಾಲ ಕಾಲಕ್ಕೆ ಆಗುವ ಬದಲಾವಣೆಗಳನ್ನು ಒಪ್ಪಿಕೊಂಡು, ಅದರಂತೆ ನಡೆದುಕೊಳ್ಳುವುದು ಒಳಿತಲ್ಲವೇ? ನಾವು ಯುಗಾದಿಯನ್ನು ಹೊಸವರ್ಷವೆಂದು ಒಪ್ಪುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಆ ದಿನ ಮನೆಯಲ್ಲಿ ವಿಶೇಷ ಅಡುಗೆಯನ್ನು ತಯಾರಿಸಿ ಕುಟುಂಬ ಸಮೇತರಾಗಿ ಊಟ ಮಾಡುತ್ತೇವೆ. ಹೊಸ ಬಟ್ಟೆಯನ್ನು ಖರೀದಿಸಿ ಧರಿಸುತ್ತೇವೆ. ಅಷ್ಟೇ ಅಲ್ಲ, ಮುಂದಿನ ಒಂದು ವರ್ಷದ ಕಾಲ ಜೀವನದಲ್ಲಿ ಕಷ್ಟ- ಸುಖಗಳು ಸಮನಾಗಿರಲಿ ಎಂದು ಆಶಿಸುತ್ತೇವೆ. ಇದನ್ನೆಲಾ ಯಾಕೆ ಮಾಡುತ್ತೇವೆ? ಇದರ ಹಿಂದಿರುವುದು ಹೊಸ ವರ್ಷದ ಸಂಭ್ರಮ ಎನ್ನುವುದನ್ನು ಯಾಕೆ ನಾವು ಒಪ್ಪಿಕೊಳ್ಳುತ್ತಿಲ್ಲ? ಯುಗಾದಿ ಹೊಸವರ್ಷ ಎಂದು ಯಾಕೆ ನಮ್ಮ ಸಂಕುಚಿತ ಮನಸ್ಸಿಗೆ ಅರ್ಥವಾಗುತ್ತಿಲ್ಲ. ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ನಾವು ಒಪ್ಪಿಕೊಂಡ ಇಂಗ್ಲೀಷ್ ಕ್ಯಾಲೆಂಡರ್ ಬದಲಾದಾಗ ಅದನ್ನು ಹೊಸ ವರ್ಷ ಎಂದು ಹೇಳುವ ನಮಗೆ ನಮ್ಮ ಪ್ರಕೃತಿಯ ಬದಲಾವಣೆಯಾಗುವ ಹೊತ್ತು ಹೊಸ ವರ್ಷ ಎನಿಸುವುದಿಲ್ಲ ಎನ್ನುವ ಬೇಸರ ಮನಸಿಗೆ.....
ಎನೀ ಹೌ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯ.