ಸೆಪ್ಟೆಂಬರ್ 6, 2011

ಇಂದೆಕೋ ಮನದಲ್ಲಿ ದುಗುಡ ತುಂಬಿದೆ

ನಾನಿವತ್ತು ನಿಮ್ಮನ್ನ ಪುಟ್ಟ ಕಂದಾ ಎಂದು ಕರೆಯಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದೇನೆ. ನೀರು ತುಂಬಿದ ಮಂಜಾದ ಕಣ್ಣುಗಳ ಮುಂದೆ ನಿಮ್ಮ ಮುಖ ಕಾಣುತ್ತಿದೆಯಾದರೂ ಅದನ್ನು ಎಂದಿನಂತೆ ದಿಟ್ಟಿಸಲು ನನ್ನಿಂದಾಗದು. ನಾನು ಮೊದಲ ಬಾರಿಗೆ ನಿಮ್ಮ ಮುಂದೆ ಅಪರಾದಿ ಸ್ಥಾನದಲ್ಲಿ ನಿಂತಿದ್ದೇನೆ.
ಹೌದು, ನೀವು ನನಗೆ ಸಾರಿ ಸಾರಿ ಹೇಳಿದ್ದು, ನಮ್ಮಿಬ್ಬರ ನಡುವೆ ಇಷ್ಟೊಂದು ಆತ್ಮೀಯತೆ ಬೆಸೆದ ಮೊಬೈಲ್ ಸಂದೇಶಗಳನ್ನು ಡಿಲಿಟ್ ಮಾಡು, ನೆನಪುಗಳು ಯಾವತ್ತೂ ಶಾಶ್ವತ ಅವಷ್ಟೇ ನಮಗೆ ಸಾಕು ಎಂದು. ಆದರೆ ನಾನು ಅದನ್ನು ಕೇಳದೆ. ಅವೆಲ್ಲವನ್ನು ಹಾಗೆಯೇ ಉಳಿಸಿದ್ದೆ. ಅದೇ ಇಂದು ನನ್ನ ಈ ಆತಂಕ, ದುಗುಡಗಳಿಗೆ ಕಾರಣವಾಗಿದೆ. ನಾನು ಅಪರಾಧಿ ಎನ್ನುವ ಭಾವನೆ ಮನಸಿಗೆ ಬರಲು ಕಾರಣವಾಗಿದೆ. 
ಹಾಗೆ ನೋಡಿದರೆ ನಾನು ನಿಮಗಿಂತ ಬಹಳ ಚಿಕ್ಕವಳು (ವಯಸ್ಸಿನಲ್ಲೂ ಸ್ಥಾನದಲ್ಲೂ), ನಿಮ್ಮೊಂದಿಗೆ ಇಷ್ಟೊಂದು ಸದರದಲ್ಲಿ ಮಾತನಾಡುವ ಯಾವ ಅರ್ಹತೆಯೂ ನನಗಿಲ್ಲ! ನಿಮ್ಮಲ್ಲಿ ಇಷ್ಟೊಂದು ಸದರದಿಂದ ವರ್ತಿಸಿ ನಾನು ನಿಮ್ಮ ತೇಜೋವಧೆಗೆ ಕಾರಣಳಾಗುತ್ತಿದ್ದೇನಾ ಎನ್ನುವ ಅನುಮಾನ ಹಲವುಬಾರಿ ಮನಸ್ಸಿನಲ್ಲಿ ಹಲವು ಬಾರಿ ತೇಲಿ ಹೋಗಿದ್ದಿದೆ. ಆದರೆ ಇಂದು ಆ ಸಂಶಯ ಮನದಲ್ಲಿ ಆಳವಾಗಿ ಬೇರೂರಿದೆ. ನಿಮ್ಮ ವರ್ಚಸ್ಸಿಗೆ ಕೆಡುಕಾಗುವ ಯಾವ ಕೆಲಸವನ್ನು ನಾನು ಮಾಡಲಾರೆ. ನನ್ನ ಅನುಮಾನ ನಿಜವೇ ಆಗಿದ್ದರೆ ನಿಮ್ಮಿಂದ ನಾನು ದೂರಾಗಲೂ ಬೇಸರವಿಲ್ಲ! ನನ್ನಿಂದಾಗಿ ಯಾರಿಗೂ ತೊಂದರೆಯಾಗ ಕೂಡದು ಎಂದು ಯಾವತ್ತೂ ಬಯಸುತ್ತೇನೆ. ಆದರೆ ಮನದಲ್ಲಿ, ಈ ಪುಟ್ಟ ಹೃದಯದಲ್ಲಿ ನಿಷ್ಕಲ್ಮಶ ಪ್ರೀತಿ ಯಾವಾಗಲೂ ಇದ್ದೇ ಇರುತ್ತೆ. 
ಹಿಂದೊಮ್ಮೆ ಮಾತನಾಡುವಾಗ ನೀವು ನನ್ನಲ್ಲಿ ನಿನಗೇನುಬೇಕಾದರೂ ನನಗೆ ಹೇಳು, ನನ್ನಿಂದ ಸಾಧ್ಯವಾದರೆ ಕೊಡುತ್ತೇನೆ, ಅಥವಾ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದಾಗ ನಾನು, ನನಗೇನು ಬೇಡ, ಸಾಧ್ಯವಾದರೆ ನಾನು ಕೊಟ್ಟ ಪ್ರೀತಿಯನ್ನು ನನಗೆ ವಾಪಾಸು ಕೊಡಿ ಅಂತ ಹೇಳಿದ್ದು ನೆನಪು. ಅದು ನಮ್ಮ ಗೆಳೆತನದ ಆರಂಭದ ದಿನಗಳು. ಆಗ ನಮ್ಮ ಬದುಕಿನ ಚಿಕ್ಕಪುಟ್ಟ ವಿಚಾರಗಳು ಖುಷಿ ತಂದು ಕೊಡುತ್ತಿದ್ದವು. ಅಲ್ಲಿ ಇಬ್ಬರ ಸ್ವಾರ್ಥವೂ ಇದ್ದಿರಬೇಕು. ಎಲ್ಲಿ ಒಬ್ಬ ಒಳ್ಳೆಯ ಮನಸ್ಸಿನ ವ್ಯಕ್ತಿ ನಮ್ಮ ಕೈಜಾರಿ ಹೋಗುವುದೋ ಎನ್ನುವ ಆತಂಕ ಜೀವನದ ಪ್ರತೀ ಕ್ಷಣವನ್ನು ಆಸ್ವಾದಿಸಲು ಕಲಿಸಿದ್ದವೋ ಎನೋ. ಆದರೆ ಈಗೀಗ ಪ್ರತೀ ದಿನ ಒಂದಲ್ಲ ಒಂದು ವಿಚಾರವಾಗಿ ಪ್ರತೀ ದಿನ ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ನಾನು ನಿಮ್ಮ ಮನಸು ನೋಯಿಸಿದರೆ, ಮತ್ತೆ ಕೆಲವೊಮ್ಮೆ ನೀವು ನನ್ನ ಮನಸು ನೋಯಿಸುವುದು. ಇದು ನಮ್ಮಿಬ್ಬರ ನಡುವಿನ ಜುಗಲ್ ಬಂದಿ ಆಗಿಬಿಟ್ಟಿದೆ. 
ಗೆಳೆಯಾ ಎಂದು ಕರೆಯುತ್ತೇನೆ, ನಾನು ಮೊದಲಿನಿಂದಲೂ ತುಂಬಾ ಕೋಪಿಷ್ಟೆ. ನಾನಂದುಕೊಂಡಂತೆ ಆಗಬೇಕು ಎನ್ನುವ ಛಲ. ಅದು ಕೆಲವೊಮ್ಮೆ ಒಳ್ಳೆಯದಾಗಿದ್ದರೂ ಪ್ರತೀ ಸಲ ಸರಿಯಾದ ನಿರ್ಧಾರವೇ ಆಗಿಲ್ಲ. ಆಗೆಲ್ಲಾ ಕೆಲವೊಮ್ಮೆ ರಂಪಾಟ ಮಾಡಿದ್ದೂ ಇದೆ. ನನ್ನ ಜೀವನದಲ್ಲಿ ಕೆಲವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದೂ ಇದೆ. ಅವುಗಳಿಗಾಗಿ ನಾನು ಇವತ್ತಿನ ವರೆಗೂ ಕೊರಗಿಲ್ಲ. ನಾನು ಮಾಡಿದ್ದೂ ಸರಿ ಎಂದೇ ಭಾವಿಸಿದ್ದೇನೆ. ಆದರೆ ಇವತ್ತು ನಾನು ಮರುಗುತ್ತಿರುವುದು ನೀವು ನನಗೆ ಹೇಳಿದಾಗಲೂ ಅದನ್ನು ನಿರ್ಲಕ್ಷಿಸಿ ಉದ್ದಟತನ ತೋರಿಸಿ ನಿಮ್ಮನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದ್ದಕ್ಕೆ. ಶುಭ್ರವಾಗಿರುವ ನಿಮ್ಮ ಬದುಕಿನಲ್ಲಿ ನಾನು ಕಪ್ಪುಚುಕ್ಕೆಯಾಗುತ್ತಿದ್ದೇನಾ ಅನ್ನೂ ಭಯ ಕಾಡುತ್ತಿದೆ. ನನ್ನಿಂದ ನಿಮ್ಮ ವರ್ಚಸ್ಸಿಗೆ ತೊಂದರೆಯಾಗುತ್ತಿದೆಯಾ ಎನ್ನುವ ಪ್ರಶ್ನೆ ಉತ್ತರವಿಲ್ಲದೆ ನನ್ನ ಮನಸ್ಸಿನಲ್ಲಿದೆ. ಇದನ್ನು ದೂರ ಮಾಡಲು ನಿಮ್ಮಿಂದ ಸಾಧ್ಯ. ಆದರೆ ನನ್ನ ಕಡೆಗೆ ಯೋಜಿಸದೆ, ನಿಮಗೆ ತೊಂದರೆಯಾಗದಂತೆ ವ್ಯಾವಹಾರಿಕವಾಗಿ ಯೋಚಿಸಿ ನಿಮ್ಮ ನಿರ್ಧಾರ ತಿಳಿಸಿ. ನನಗೆ ಗೊತ್ತಿದೆ, ಸ್ನೇಹಕ್ಕೆ, ಭಾವನೆಗಳಿಗೆ ನೀವು ಎಷ್ಟರ ಮಟ್ಟಿಗೆ ಗೌರವ, ಆದ್ಯತೆ ಕೊಡ್ತೀರಿ ಅಂತ. ಆದರೆ ಭಾವನೆ ವ್ಯಾವಹಾರಿಕ ಜೀವನದಲ್ಲಿ ಹೆಚ್ಚಿನ ಪಾತ್ರವಹಿಸುವುದಿಲ್ಲ ಅಲ್ವಾ?!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ