ಏಪ್ರಿಲ್ 15, 2012

ಕರಾವಳಿಯಲ್ಲಿ ಸೂರ್ಯಾಸ್ತ


ಮೂಡಣ ಮಲೆಯಲ್ಲಿ ಸೂರ್ಯ ಮೆಲ್ಲನೇ ಏರಿ ಬರುವ ಚಂದವನ್ನು ಸವಿಯುವುದೇ ಒಂದು ಹಿತವಾದರೆ, ಇಳಿ ಹೊತ್ತಿನಲ್ಲಿ ಎಲ್ಲೆಡೆ ಕೆಂಬಣ್ಣವನ್ನು ಚೆಲ್ಲುತ್ತಾ ಪಡುವಣದ ನೀಲ ಕಡಲಿನೊಂದಿಗೆ ಲೀನವಾಗುವಾಗ ಕ್ಷಣಗಳು ಇನ್ನೊಂದು ಅನುಭವ.


ಜಿಲ್ಲೆಯುದ್ದಕ್ಕೂ ಸಮುದ್ರ ಕಿನಾರೆ, ಜೊತೆಗೆ ದಕ್ಷಿಣದಿಂದ ಉತ್ತರಕ್ಕೆ ಸಾಗುವವರೆಗೂ ನದಿಗಳಿಗೇನೂ ಕೊರತೆ ಇಲ್ಲ. ಮಂಗಳೂರಿನಿಂದ ಜಿಲ್ಲೆಗೆ ಪ್ರವೇಶ ಆಗುವಾಗ ವೊದಲಾಗಿ ಶಾಂಭವಿ ತನ್ನ ಅಂಕು ಡೊಂಕಿನ ವೈಯ್ಯಾರವನ್ನು ಆರಂಭಿಸುತ್ತಾಳೆ. ಜಿಲ್ಲೆಯ ಉತ್ತರ ಗಡಿಯ ಶಿರೂರು ತಲುವುವಾಗ ಪಶ್ಚಿಮ ಘಟ್ಟದಲ್ಲಿ ಜನ್ಮವೆತ್ತಿ ಕಡಲು ಸೇರುವ ತವಕದಲ್ಲಿ ಭಿನ್ನಾಣದಿಂದಲೇ ಓಡೋಡಿ ಬರುವ ಸೌಪರ್ಣಿಕ. ಈ ನಡುವೆ ಪಾಂಗಾಳ, ಉದ್ಯಾವರ, ಸುವರ್ಣಾ, ಸೀತಾ, ಚಕ್ರಾ.... ಹೀಗೆ ಇನ್ನಷ್ಟು ನದಿಗಳ ಹರಿವು. ಸುಮಾರು ೬೧ ಮೈಲು ಉದ್ದಕ್ಕೆ ಮೈಚಾಚಿಕೊಂಡು ಮಲಗಿರುವ ಕಡಲತೀರ. ಗುಡ್ಡ-ಕಾಡು, ಬಯಲು, ಗದ್ದೆ, ತೋಟ ಎತ್ತ ನೋಡಿದರೂ ಹಸುರಿಗೂ ಕೊರತೆಯಿಲ್ಲ. ಇವುಗಳ ಮೇಲೆಲ್ಲಾ ಭಾಸ್ಕರ ತನ್ನ ಬೆಳಕನ್ನು ಚೆಲ್ಲುತ್ತಾ ಎಲ್ಲೋ ಎದ್ದು, ಇನ್ನೆಲ್ಲೋ ಮುಳುಗಿ, ಮತ್ತೆಲ್ಲೋ ಪ್ರತ್ಯಕ್ಷವಾಗುತ್ತಾ ಸಂಜೆ ತನ್ನ ಹೊನ್ನ ಕಿರಣಗಳನ್ನು ಸೂಸುತ್ತಿದ್ದರೆ ಅದೊಂಥರಾ ಚೆನ್ನ.


ಉಡುಪಿಯಲ್ಲಿ ಕಂಡ ಸೂರ್ಯಾಸ್ತ ಅಥವಾ ಸೂರ್ಯೋದಯ ಪಕ್ಕದ ಮಲ್ಪೆಗೆ ಹೋದರೆ ಕಾಣಸಿಗದು. ಮಲ್ಪೆಯದು ಕೆಮ್ಮಣ್ಣುವಿನಲ್ಲಿ ಊಹುಂ ಸಾಧ್ಯವಿಲ್ಲ. ಒಂದೊಂದು ಕಡೆಯಲ್ಲಿಯೂ ಸೂರ್ಯಾಸ್ತ ನೋಡುವುದು ಅದ್ಭುತ. ಇಲ್ಲಿ ಸೂರ್ಯೋದಯದ ವಿಹಂಗಮ ನೋಟವನ್ನು ಕಾಣುವುದು ಕಷ್ಟ. ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಡೆಗಳಲ್ಲಿ ನೋಡಬಹುದು. ಆದರೆ ಸೂರ್ಯಾಸ್ತ ಮಾತ್ರ ಎಲ್ಲೆಂದರಲ್ಲಿ ಜನರ ಮನಸಿಗೆ ಮುದ ನೀಡುತ್ತದೆ.

ಪಶ್ಚಿಮ ಘಟ್ಟದ ಆಗುಂಬೆಯಿಂದ, ಅತ್ತ ಹೊಸನಗರದಿಂದ ಉಡುಪಿಗೆ ಬರುವಾಗ ಬಾಳೆಬರೆ ಘಾಟ್‌ನಿಂದ ಆದಿತ್ಯ ಕಡಲಿನೊಂದಿಗೆ ಒಂದಾಗಲೂ ಹವಣಿಸುವುದನ್ನು ಕಾಣುವುದೇ ಸೊಗಸು. ಇನ್ನು ನದಿ ತೊರೆಗಳಿದ್ದಲ್ಲಿ ಸೂರ‍್ಯ ಮುಳುಗುವ ಯಾವತ್ತೂ ಸೌಂದರ್ಯವನ್ನು ಸವಿಯಲು ಬೋರ್ ಅನಿಸುವುದೇ ಇಲ್ಲ. ಮಲ್ಪೆ ಸಮೀಪದ ತೋನ್ಸೆಪಾರ್‌ನಲ್ಲಿ ಸೂರ್ಯಾಸ್ತ ಅದೊಂದು ಅಪೂರ್ವ ಕ್ಷಣ.


ಈ ಪ್ರಕೃತಿ ವೈಭವವನ್ನು ಕಣ್ಣು ಕೋರೈಸುವಂತೆ ಮಾಡಲು ಉದಯಾಸ್ತಮಾನ ಕಾಲದಲ್ಲಿ ಸೂರ್ಯ ಬೀರುವ ಸಪ್ತವರ್ಣ ಬದಲಾಗುತ್ತ ಒಮ್ಮೆ ಹಗಲಾಗಿ, ಮತ್ತೊಮ್ಮೆ ಕತ್ತಲಾಗಿ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ಒಂದೊಂದು ಅನುಭವವೂ ಮನದಲ್ಲಿ ಅಚ್ಚಳಿಯದ ವಿಸ್ಮಯ ಮೂಡಿಸುತ್ತದೆ. ಕರಾವಳಿಯಲ್ಲಿ ಸೂರ್ಯೋದಯ, ಸೂರ್ಯಾಸ್ತವನ್ನು ನೋಡುವುದೇ ಸೊಗಸು.



2 ಕಾಮೆಂಟ್‌ಗಳು:

  1. ಸುಂದರ ಚಿತ್ರಗಳು ಮತ್ತು ವಿವರಣೆ..
    ಇಷ್ಟವಾಯ್ತು...

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಸುಷ್ಮಾ. ನನ್ನಲ್ಲಿ ಸೂರ್ಯೋದಯದ ಚಿತ್ರಗಳು ಕಡಿಮೆ ಇವೆ. ಯಾಕಂದ್ರೆ ನಾನು ಸೂರ್ಯ ವಂಶದವಳು. ಸೂರ್ಯೋದಯ ನೋಡೋದೆ ಕಡಿಮೆ. ಹಾಗಾಗಿ ಸೂರ್ಯಾಸ್ತವನ್ನೇ ಹೆಚ್ಚಾಗಿ ಸೆರೆ ಹಿಡಿದಿದ್ದೇನೆ. ಬರಹವೂ ಕೂಡ....

    ಪ್ರತ್ಯುತ್ತರಅಳಿಸಿ