ಇತಿಹಾಸದಲ್ಲಿ ಕರಾಳದಿನವಾಗಿ ಅಚ್ಚೊತ್ತಿದ ದಿನ ಇಂದು, ಮಂಗಳೂರು ವಿಮಾನ ದುರಂತಕ್ಕೆ ಇಂದು ವರ್ಷ. ದುರಂತ ಕುರಿತ ಪರಿಹಾರದ ವ್ಯಾಜ್ಯಗಳು ಇನ್ನೂ ಮುಗಿದಿಲ್ಲ. ಅದೆಷ್ಟೋ ಕನಸುಗಳನ್ನು ಹೊತ್ತುಕೊಂಡು ಬಂದಿರುವ ೧೫೮ ಜೀವಗಳು ತಮ್ಮ ಕನಸುಗಳೊಂದಿಗೆ ಸುಟ್ಟು ಕರಕಲಾಗಿದ್ದವು. ವಿಮಾನ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಮನೆಯಲ್ಲೂ ದುಃಖ ಮೌನವಾಗಿ ಮಡುಗಟ್ಟಿದೆ. ವರ್ಷವಾಗುತ್ತಲೇ ಅಗಲಿದವರ ನೆನಪು ಕಣ್ಣೀರ ಹನಿಯಾಗಿ ಜಿನುಗುತ್ತಿದೆ...
ಆಘಾತದಿಂದ ಹೊರ ಬರದ ಮೆಹಬೂಬ್ ಕುಟುಂಬ
ಕಳೆದ ವರ್ಷ ಮೇ ೨೧ರಂದು ತನ್ನ ಪತ್ನಿಯನ್ನು ಕಳೆದುಕೊಂಡ ಉಡುಪಿ ವಳಕಾಡು ನಿವಾಸಿ ಮಹಮ್ಮದ್ ಮೆಹಬೂಬ್ ಕುಟುಂಬಕ್ಕೆ ಮೇ ೨೨ರಂದು ಶನಿವಾರ ಮುಂಜಾನೆ ಆಘಾತಕಾರಿ ಸುದ್ದಿಯೊಂದು ಗರಬಡಿದಂತೆ ಮಾಡಿತ್ತು. ಒಂದೇ ಮನೆಯಲ್ಲಿ ನಾಲ್ಕು ಮತ್ತೊಂದು ಜೀವ ಮಡಿದ ಸುದ್ದಿ ಎಷ್ಟೇ ಗಟ್ಟಿಗನನ್ನೂ ಕುಸಿಯುವಂತೆ ಮಾಡುತ್ತದೆ. ಅಂದ ಮೇಲೆ ೮೫ವರ್ಷ ಪ್ರಾಯದ ಇಳಿವಯಸ್ಸಿನಲ್ಲಿ ಮನಸ್ಸು ಯಾವ ರೀತಿ ಜರ್ಜರಿತವಾಗಿರಬಹುದು? ಕಿರಿಯ ಮಗ ಮಹಮ್ಮದ್ ಜಿಯಾದ್, ಸೊಸೆ ಸಮೀನಾ, ಮೊಮ್ಮಗ ಮಹಮ್ಮದ್ ಜುಬೇರ್ ಮತ್ತು ಮೊಮ್ಮಗಳು ಝೈನಬ್ ಜಿಯಾದ್ ಅವರನ್ನು ಜವರಾಯ ಬೆನ್ನಟ್ಟಿದ್ದ.
ಝೈನಬ್ ಜಿಯಾದ್
ಮಹಮ್ಮದ್ ಜುಬೇರ್
ಮಹಮ್ಮದ್ ಜಿಯಾದ್
ಸಮೀನಾ
ಎಳೆಯ ಜೀವಗಳು ಎನ್ನುವುದನ್ನೂ ನೋಡದೇ ತನ್ನ ಬರ ಸೆಳೆದೇ ಬಿಟ್ಟ. ಅದರಲ್ಲಿ ಮಕ್ಕಳಿಬ್ಬರ ಶವಸಂಸ್ಕಾರಕ್ಕೂ ಮೃತ ದೇಹಗಳು ಸಿಗಲಿಲ್ಲ. ಅದೃಷ್ಟ ವಶಾತ್ ಇನ್ನಿಬ್ಬರು ಮಕ್ಕಳಿಗೆ ಶಾಲಾರಂಭವಾಗುವುದೆಂದು ಹೇಳಿ ವಿದೇಶದಲ್ಲಿರುವ ತನ್ನ ಮನೆಯಲ್ಲಿಯೇ ಬಿಟ್ಟು ಬಂದಿದ್ದರಿಂದ ಮಹಮ್ಮದ್ ರೋಹನ್ ಮತ್ತು ರಾಬಿಯಾ ಜಿಯಾದ್ ಪ್ರಾಣ ಉಳಿಯಿತು.
ಈ ಇಬ್ಬರು ಮಕ್ಕಳು ತಮ್ಮ ದೊಡ್ಡಪ್ಪ ಮಹಮ್ಮದ್ ಸಾದಕತ್‌ನ ಬೆಂಗಳೂರಿನ ಮನೆಯಲ್ಲಿದ್ದುಕೊಂಡು ತಮ್ಮ ಓದು ಮಂದುವರಿಸಿದ್ದಾರೆ. ರಜಾ ದಿನಗಳಲ್ಲಿ ಊರಿಗೆ ಬಂದು ಅಜ್ಜನೊಂದಿಗೆ ದಿನಗಳನ್ನು ಕಳೆಯುತ್ತಾರೆ.
ಪರಿಹಾರದ ಬಗ್ಗೆ ಮಹಮ್ಮದ್ ಜಿಯಾದ್ ಅಣ್ಣ ಸಾದಕತ್ ಅವರೆಲ್ಲಿ ಕೇಳಿದರೆ, ಏರ್ ಇಂಡಿಯಾದಿಂದ ತುರ್ತು ಪರಿಹಾರ ಅಂತ ನಾಲ್ವರಿಗೆ ೩೦ ಲಕ್ಷ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಒಬ್ಬೊಬ್ಬರಿಗೆ ತಲಾ ಎರಡು ಲಕ್ಷ ರೂ. ಸಿಕ್ಕಿದ್ದು ಬಿಟ್ಟರೆ, ಬೇರೆ ಯಾವುದೇ ಪರಿಹಾರ ಸಿಗಲಿಲ್ಲ. ಸದ್ಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ೨೫ ಲಕ್ಷ ರೂ. ಮತ್ತು ಉದ್ಯೋಗ ರಹಿತ ಮಹಿಳೆಯರಿಗೆ ೩೦ ಲಕ್ಷ ರೂ.ವನ್ನು ನಿಗದಿ ಪಡಿಸಲಾಗಿದೆ. ಇನ್ನು ಉದ್ಯೋಗಸ್ಥರಿಗೆ ಅವರ ಉದ್ಯೋಗ ಮತ್ತು ಸಂಬಳದ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ವೊತ್ತವನ್ನು ನಿಗದಿ ಪಡಿಸುತ್ತೇವೆ ಎನ್ನುವ ಮಾಹಿತಿಯನ್ನು ಈಗಾಗಲೇ ಏರ್ ಇಂಡಿಯಾ ನೀಡಿದೆ ಎನ್ನುತ್ತಾರೆ. ೭೫ ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ ಸಂಸ್ಥೆ ಈಗ ಕನಿಷ್ಠ ವೊತ್ತ ನೀಡದಿರುವುದು. ಬೇಸರ ತಂದಿದೆ. ನಮಗೆ ಈಗ ಹಣದ ಅಗತ್ಯವಿಲ್ಲ. ಆದರೆ ಒಂದೊಂದು ಮನೆಯಲ್ಲಿದ್ದ ದುಡಿಯುವ ಒಬ್ಬ ವ್ಯಕ್ತಿಯೂ ಈ ದುರಂತದಲ್ಲಿ ಸತ್ತಿದ್ದಾರೆ. ಅವರ ಮನೆಯ ಸ್ಥಿತಿ ಯಾವ ರೀತಿ ಇದೆ. ಅವರು ಬದುಕಿಗಾಗಿ ಏನು ಮಾಡಬೇಕು. ಕೇಳಿದರೆ ಕೋರ್ಟ್‌ಗೆ ಹೋಗಿ ಅಂತಾರೆ. ಕೋರ್ಟ್‌ಗೆ ಹೋಗಲು ಒಪ್ಪಲ್ಲ. ಈಗ ಮನೆಯಲ್ಲಿಯೂ ಅಷ್ಟೆ, ತಂದೆ ಸಿಕ್ಕಿದಷ್ಟು ಸಿಗಲಿ ಅದಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತಲಾರೆ ಎನ್ನುತ್ತಾರೆ. ಇಂತಹ ಪರಿಸ್ಥಿತಿ ಹೆಚ್ಚಿನವರ ಮನೆಯಲ್ಲಿದೆ ಎಂದು ಸದಾಕತ್ ಮಾತು ಮುಂದುವರೆಸುತ್ತಾರೆ. ಇದ್ದ ಇಬ್ಬರು ಮಕ್ಕಳು ನಮ್ಮ ಮನೆಯಲ್ಲಿದ್ದಾರೆ. ನನ್ನ ಮಕ್ಕಳೊಂದಿಗೆ ಇರುವುದರಿಂದ ಅವರ ಮನಸ್ಸೂ ಹಗುರ ಅನ್ನಿಸುತ್ತದೆ. ಹೆಚ್ಚುಕಡಿಮೆ ನನ್ನ ಮಕ್ಕಳದೇ ಪ್ರಾಯ ಆಗಿದ್ದರಿಂದ ಒಳ್ಳೆಯ ಸ್ನೇಹಿತರಾಗಿ ಬೆಳೆಯುತ್ತಿದ್ದಾರೆ. ಈಗ ಊರಿಗೆ ಬಂದು ಅವರಿಬ್ಬರೂ ಬಜ್ಪೆಯಲ್ಲಿರುವ ಅಜ್ಜಿಯ ಮನೆಗೆ ಹೋಗಿದ್ದಾರೆ. ಆದರೆ ತಂದೆ ಮಾತ್ರ ಈ ಶಾಕ್‌ನಿಂದ ಇನ್ನೂ ಹೊರಬರಲಿಲ್ಲ ಎಂದು ಹೇಳುತ್ತಾರೆ.
ಮನೆಯಲ್ಲಿದ್ದ ಇಳಿಪ್ರಾಯದ ತಾತ ಹೀಗೆನ್ನುತ್ತಾರೆ, ಒಂದೇ ಮನೆಯಲ್ಲಿ ಐದು ಜೀವ ಹೋಗಿತ್ತು ಆ ದಿನ. ನನ್ನ ಹೆಂಡತಿ, ಮಗ ಸೊಸೆ, ವೊಮ್ಮಕ್ಕಳು. ನೋವಾಗುತ್ತದೆ. ಆದರೆ ದೇವರ ದಯೆ, ಅದೇ ವಿಮಾನದಲ್ಲಿ ನಮ್ಮ ಕುಟುಂಬದ ಇನ್ನೂ ೯ ಮಂದಿ ಬರುವವರಿದ್ದರು. ಅದೃಷ್ಟ ಎನ್ನಬೇಕು ಟಿಕೆಟ್ ಸಿಗದೇ ಅವರು ಬೇರೆ ವಿಮಾನದಲ್ಲಿ ಬಂದುದರಿಂದ ಅವರ ಪ್ರಾಣ ಉಳಿಯಿತು. ಎಲ್ಲವೂ ದೇವರಿಚ್ಛೆ.
ಜೆ.ಪಿ ನೆನಪು ಹಸಿರು
ಕೆಂಜಾರಿನ ವಿಮಾನದುತಂರದಲ್ಲಿ ಮಡಿದವರಲ್ಲಿ ಉಡುಪಿ ಕೆಮ್ತೂರಿನ ಜಯಪ್ರಕಾಶ್ ದೇವಾಡಿಗ ಕೂಡ ಒಬ್ಬರು. ಹುಟ್ಟಿದೂರು ಕೆಮ್ತೂರು ಆದರೂ ಬೆಳೆದದ್ದು, ಜನಪ್ರಿಯತೆಗಳಿಸಿದ್ದು ಮೂಡುಬಿದಿರೆ.
ಮದುವೆಯ ಯೋಚನೆಯೊಂದಿಗೆ ಅರಬ್ ದೇಶದಿಂದ ಆತ ಬಂದಿದ್ದ. ಗೆಳೆಯರೆಲ್ಲರಿಗೂ ವಿಶೇಷ ಸುದ್ಧಿ ಇದೆ ಎಂದಿದ್ದ, ಆದರೆ ಬಂದ ಸುದ್ಧಿ ಸಾವಿನದ್ದಾಗಿತ್ತು. ಇದು ಗೆಳಯರ ನಡುವೆ ಜೆ.ಪಿ. ಎಂದೇ ಖ್ಯಾತರಾಗಿದ್ದ ಜಯಪ್ರಕಾಶ ದೇವಾಡಿಗ ಅವರ ಕತೆ.
ಜೆ.ಪಿ.
ಕ್ರಿಯಾಶೀಲರಾಗಿದ್ದ ಜಯಪ್ರಕಾಶ್ ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದ. ಯುವಕರೊಂದಿಗೆ ಬೆರೆತು ಎಲ್ಲರಿಗೆ ಆತ್ಮೀಯನಾಗಿದ್ದ. ಕಷ್ಟ ಎಂದವರಿಗೆ ತನ್ನಿಂದಾದ ಸೇವೆಯನ್ನು ಮಾಡುತ್ತಿದ್ದ. ಮನೆಯಲ್ಲಿರುವುದಕ್ಕಿಂತ ಹೆಚ್ಚು ಮೂಡುಬಿದಿರೆಯಲ್ಲೇ ಇರ್ತಿದ್ದ. ಅಲ್ಲಿ ಅಕ್ಕನ ಮಕ್ಕಳ ಓದಿನ ಖರ್ಚು ಅವನೇ ನೋಡಿಕೊಳ್ಳುತ್ತಿದ್ದ. ಕೆಲಸಕ್ಕೆಂದು ವಿದೇಶಕ್ಕೆ ಹೋಗಿದ್ದ. ಎರಡು ವರ್ಷಗಳ ನಂತರ ಮನೆಗೆ ವಾಪಾಸಾಗುತ್ತಿದ್ದ ದಿನ. ಅಣ್ಣನ ಮದುವೆ ವಿಚಾರ ಮಾತಕತೆ ನಡೆಯುತ್ತಿತ್ತು. ಮುಂದಿನ ವರ್ಷ ಅವನೂ ಮದುವೆಯಾಗಬೇಕು ಎಂದಿದ್ದ. ಆದರೆ ಮನೆಗೆ ಮರಳಲೇ ಇಲ್ಲ ಎಂದು ಹೇಳುತ್ತಾ ಮೌನವಾಗುತ್ತಾರೆ ಅವರ ಅಣ್ಣ. ಮನೆಯಲ್ಲಿ ಹೆಚ್ಚೇನು ಅನುಕೂಲವಿಲ್ಲ. ನಮ್ಮದು ದೊಡ್ಡ ಕುಟುಂಬ ನಾವು ಅಣ್ಣ ತಮ್ಮಂದಿರು ನಮ್ಮ ಸಂಸಾರ ಎಂದು ಮಾಡಿಕೊಂಡ ಮೇಲೆ ನಂತರದವರು ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಅದರಂತೆ ಜಯಪ್ರಕಾಶನೇ ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಅವನನ್ನ ನಾವು ಎಷ್ಟು ನೆನೆಯುತ್ತೇವೋ ಅದರಂತೆ ಸಮಾಜವೂ ಅವನನ್ನು ನೆನೆಯುತ್ತದೆ ಎಂದವರು ಹೇಳುತ್ತಾರೆ.
ಕೆಲಸ ನಿಮಿತ್ತ ವಿದೇಶಕ್ಕೆ ತೆರಳಿದ ಜಯಪ್ರಕಾಶ್ ಮರಳಿ ಬಂದದ್ದು ಗುರುತಿಸಲಾಗದ ಬೆಂದ ಮಾಂಸದ ತುಂಡಾಗಿ ಎಂಬುದು ದುರಂತವೇ ಸರಿ. ಆದರೆ ಈಗ ಮೂಡುಬಿದಿರೆ ಪಡುಮಾರ್ನಾಡಿನಲ್ಲಿ ಅವರ ಸ್ಮರಣಾರ್ಥ ರಂಗ ಮಂದಿರ ನಿರ್ಮಾಣವಾಗಿದೆ. ಇಂದು ಅದರ ಲೋಕಾರ್ಪಣಾ ಸಮಾರಂಭವೂ ನಡೆಯಲಿದೆ. ಸ್ನೇಹಿತನ ನೆನಪನ್ನು ಹಸಿರಾಗಿಸುವ ಪಡುಮಾರ್ನಾಡು ಯುವಕ ಮಂಡಲ ಮತ್ತು ಪ್ರಜ್ಞಾ ಯುವತಿ ಮಂಡಲದ ಕಾರ್ಯವೈಖರಿಯನ್ನು ಮಾತ್ರ ಮೆಚ್ಚಲೇ ಬೇಕು.
ಮನೆಮಗನ ನೆನಪಲ್ಲಿ ಕಣ್ಣೀರಧಾರೆ
ಆ ಮನೆಯಲ್ಲಿ ಸಂಗೀತದ ಆಲಾಪ ಕೇಳುತ್ತಿತ್ತು, ಮಂಗಳವಾದ್ಯ ಮೊಳಗುತ್ತಿತ್ತು. ಹೌದು ಕಳೆದ ವರ್ಷ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕಿಶೋರ್ ಕುಮಾರ್ ಮನೆ ಅದು. ಮನೆಮಗ ತೀರಿಕೊಂಡು ವರ್ಷ ಆಗುವುದರೊಳಗೇ ಮಂಗಳವಾದ್ಯ ಮೊಳಗುತ್ತಿತ್ತು ಎಂದರೆ ಅವರು ಕಿಶೋರ್ ಅಗಲಿಕೆಯಿಂದ ದೂರವಾಗಿದ್ದಾರೆ ಎಂದರ್ಥವಲ್ಲ. ಹಿಂದೂ ಸಂಪ್ರದಾಯದಲ್ಲಿ ಕ್ರಮವೊಂದಿದೆ, ಮನೆಯಲ್ಲಿ ಸಾವುನೋವು ಸಂಭವಿಸಿದರೆ ಆ ಮನೆಯಲ್ಲಿ ವರ್ಷದೊಳಗೆ ಶುಭಕಾರ್ಯ ನಡೆಯಬೇಕು. ಇಲ್ಲದಿದ್ದರೆ ಮುಂದಿನ ಮೂರು ವರ್ಷ ಶುಭ ಕಾರ್ಯ ನಡೆಯುವಂತಿಲ್ಲ. ಅದಕ್ಕೆ ಆತುರಾತುರವಾಗಿ ಕಿಶೋರ್ ಮನೆಯಲ್ಲಿ ಅಣ್ಣ ಗಂಗಾಧರ ಅವರ ವಿವಾಹ ಮೇ ೨೦ರಂದು ನಡೆದಿದೆ. ಮನೆ ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸುವ ಎಂದು ಮನೆ ಬಳಿ ಹೋದರೆ ಮದುಮಗ ಸಹಿತ ಯಾರ ಮೊಗದಲ್ಲೂ ಮದುವೆ ಸಂಭ್ರಮವಿಲ್ಲ. ಎಲ್ಲರೂ ಕಿಶೋರ್ ನೆನಪಲ್ಲಿ ಕರಗಿ ಹೋಗಿದ್ದರು.
ಕಿಶೋರ್ ಕುಮಾರ್
ಅವನೊಬ್ಬನಿದ್ದ, ಅವನಿದ್ದರೆ ಮನೆಯಲ್ಲಿ ಹತ್ತು ಜನ ಇದ್ದಂತೆ. ಯಾವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದ. ಎಲ್ಲಾ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುತ್ತಿದ್ದ. ಕೆಲಸಕ್ಕೆಂದು ವಿದೇಶಕ್ಕೆ ಹೋಗಿದ್ದ. ಎರಡು ವರ್ಷಗಳ ಬಳಿಕ ರಜೆಯಲ್ಲಿ ಮನೆಗೆ ಮರಳುತ್ತಿದ್ದ. ಆದರೆ ಮನೆವರೆಗೆ ಬರಲೇ ಇಲ್ಲ ಎಂದು ಕಿಶೋರ್ ತಾಯಿ ಜಲಜ ಪೂಜಾರ್ತಿ ಮದುವೆ ಮನೆಯಲ್ಲೇ ಕಣ್ಣೀರು ಸುರಿಸಿದರು. ಅಣ್ಣಂದಿರು ಏನೂ ಮಾತನಾಡದೆ ಗದ್ಗದಿತರಾದರು.
ಅಣ್ಣನ ಮದುವೆ ಸಮಾರಂಭದಲ್ಲಿ ಮನೆ ತುಂಬಾ ಓಡಾಡಬೇಕಿದ್ದ ಕಿಶೋರ್ ಕಳೆದ ಮೇ ೨೨ರಂದು ಮಸಣ ಸೇರಿದ್ದ.
ಹೊಸ ಮನೆಯಲ್ಲಿ ಬೆಳಕಿಲ್ಲ
ಮೂಲತಃ ಕೇರಳದ ಕುಟುಂಬ ಉಡುಪಿಯಲ್ಲಿ ನೆಲೆಸಿದೆ. ಈ ಮನೆಯ ಬೆಳಕೂ ವಿಮಾನ ದುರಂತದಲ್ಲಿ ಆರಿಹೋಗಿತ್ತು. ಮಹಾಬಲ ಅವರ ಪುತ್ರ ಸಂಜಯ್ ತಮ್ಮ ಹೊಸ ಮನೆಗೆ ಟೈಲ್ಸ್, ಮಾರ್ಬಲ್ ಹಾಗೂ ಇತರ ಸಾಮಗ್ರಿಗಳನ್ನು ತರಲೆಂದು ವಿದೇಶದಿಂದ ತಾಯ್ನೆಲಕ್ಕೆ ಮರಳುತ್ತಿದ್ದರು. ಆದರೆ ವಿಧಿ ಅವರಿಗೆ ಗೃಹ ಪ್ರವೇಶ ಮಾಡಲು ಬಿಡಲೇ ಇಲ್ಲ.
ಸಂಜಯ್
ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ಗೃಹಪ್ರವೇಶವಾದರೂ ಆ ಮನೆಯಲ್ಲಿ ಬೆಳಕಿಲ್ಲ! ಸಂಜಯ್ ತಂದೆ, ತಾಯಿ ಮತ್ತು ಮಗ ಶ್ರೇಯಸ್ ಈ ಮನೆಯಲ್ಲಿ ವಾಸವಾಗಿದ್ದಾರೆ. ಮಡದಿ ಉನ್ನಿಯಾಚ್ಚ ಮತ್ತು ಮಗಳು ಐಶ್ವರ್ಯ ವಿದೇಶದಲ್ಲಿದ್ದಾರೆ. ವರ್ಷದ ಸ್ಮರಣೆಗೆ ಎಲ್ಲರೂ ಮನೆಯಲ್ಲಿ ಸೇರುತ್ತಿದ್ದಾರೆ. ವಿದೇಶದಿಂದ ಪತ್ನಿ ಇಲ್ಲಿಗೆ ಆಗಮಿಸಿದ್ದಾರೆ. ಅಶ್ರುತರ್ಪಣ ಮಿಡಿಯುತ್ತಿದ್ದಾರೆ.
ಮಸುಕಾದ ಮದುವೆ ಸಂಭ್ರಮ
ಮನೆಯಲ್ಲಿ ಸಂಭ್ರಮದ ಕ್ಷಣ, ಮರುದಿನ ಸುರೇಶ್ ಕುಂದರ್ ಸಹೋದರಿಯ ಮದುವೆ ನಡೆಯುವುದಿತ್ತು. ಅದಕ್ಕಾಗಿ ದೂರದೂರಿನಿಂದ ಉಡುಗೊರೆಯೊಂದಿಗೆ ಮನೆ ಮಗ ಮನೆಗೆ ಮರಳುತ್ತಿದ್ದ. ಆದರೆ ವಿಧಿ ಆತನನ್ನು ಮನೆ ಸೇರಲು ಬಿಡಲೇ ಇಲ್ಲ. ಕೆಂಜಾರುವಿನ ವಿಮಾನ ದುರಂತದಲ್ಲಿ ಸುಟ್ಟು ಕರಕಲಾದ.
ಸುರೇಶ್ ಕುಂದರ್
ಬ್ರಹ್ಮಾವರ ಉಪ್ಪಿನ ಕೋಟೆಯ ರಾಮ ಬಂಗೇರ ಅವರಿಗೆ ಮಗನ ಮೈಮೇಲಿದ್ದ ೨೫ ಗ್ರಾಂ ತೂಕದ ಬಂಗಾರದ ಚೈನ್ ಅನ್ನು ಪೊಲೀಸರು ಒಪ್ಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಎರಡು ಸಾವಿರ ರೂ. ಕೊಟ್ಟಿದೆ. ತುರ್ತು ಪರಿಹಾರ ಎಂದು ೫ ಲಕ್ಷ ರೂ. ಏರ್ ಇಂಡಿಯಾ ನೀಡಿದ್ದು ಬಿಟ್ಟರೆ ಬೇರೇನೂ ಲಭಿಸಿಲ್ಲ. ೭೫ ಲಕ್ಷ ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ ಏರ್ ಇಂಡಿಯಾ ಈಗ ಮೊತ್ತದಲ್ಲಿ ಚೌಕಾಶಿ ಮಾಡುತ್ತಿದೆ. ಅದರ ವಿರುದ್ಧ ಕಾನೂನು ಸಮರದಲ್ಲಿದ್ದೇನೆ ಎಂದು ಮೃತ ಸುರೇಶ್ ಕುಂದರ್ ತಂದೆ ರಾಮ ಬಂಗೇರ ಹೇಳುತ್ತಾರೆ.
ಸಿಗದ ಪರಿಹಾರ
ಪರಿಹಾರದ ವಿಚಾರಕ್ಕೆ ಬಂದರೆ ಇಲ್ಲಿ ಯಾರಿಗೂ ಹಣ ಸಿಗಲಿಲ್ಲ ಎನ್ನುವುದು ಸ್ಪಷ್ಟ. ಪ್ರತಿ ಮನೆಯಲ್ಲೂ ಕೇಂದ್ರ ಸರ್ಕಾರ ಕೊಟ್ಟ ಎರಡು ಲಕ್ಷ, ರಾಜ್ಯ ಸರ್ಕಾರ ನೀಡಿದ ಎರಡು ಲಕ್ಷ ಮತ್ತು ತಿಂಗಳೊಳಗೆ ಏರ್ ಇಂಡಿಯಾ ಬಿಡುಗಡೆ ಮಾಡಿದ ಕೆಲವರಿಗೆ ೧೦ ಮತ್ತು ಕೆಲವರಿಗೆ ೫ ಲಕ್ಷ ಇಷ್ಟು ಹಣ ಬಿಟ್ಟರೆ ಯಾರಿಗೂ ಬೇರೆ ಪರಿಹಾರ ಸಿಗಲೇ ಇಲ್ಲ. ಹೌದು ಏರ್ ಇಂಡಿಯಾ ಕಂಪನಿಗೂ ಸಮಸ್ಯೆ ಇದೆ ಸಾಕಷ್ಟು ನಷ್ಟವೂ ಆಗಿದೆ. ಆದರೆ ಪ್ರಯಾಣಿಕ ಕೂಡ ಬಸ್ಸು ಹತ್ತುವಾಗಲೂ ಯಾವ ಕಂಪನಿ ಸೇಫ್ ಎನ್ನುವುದನ್ನು ಖಾತ್ರಿ ಪಡಿಸಿಕೊಂಡ ನಂತರ ಹತ್ತುತ್ತಾನೆ. ಇನ್ನು ವಿಮಾನ ಬಗ್ಗೆ ಎಷ್ಟರ ಮಟ್ಟಿಗೆ ಎಚ್ಚರ ವಹಿಸಲಾರ? ಹಾಗಿರುವಾಗ ಪ್ರತಿಷ್ಠಿತ ಕಂಪನಿಯೊಂದು ಒಂದು ವರ್ಷದಲ್ಲಿ ಯಾವುದೇ ಪರಿಹಾರ ಕ್ರಮಕೈಗೊಂಡಿಲ್ಲ ಎನ್ನುವುದು ದುರಂತವೇ ಸರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ