ಮೇ 21, 2011

ಕೆಂಜಾರು ಕಣಿವೆಯಲ್ಲಿ.....

ಅಂದು ಬೆಳಗ್ಗೆ ಎದ್ದವಳಿಗೆ ಕಹಿ ಸುದ್ದಿಯೊಂದು ಕಾದಿತ್ತು. 2010ರ ಮೇ 22ರಂದು ಬೆಳಗಿನ ಜಾವ ಸುಮಾರು 6.30ರ ಸಮಯಕ್ಕೆ ನಮ್ಮ ಪಕ್ಕದ ಊರಿನಲ್ಲಿ ಲೋಹದ ಹಕ್ಕಿ ಪಥನವಾದ ಸುದ್ದಿ ಕಿವಿ ಬೀಳುತ್ತಿದ್ದಂತೆ ಮನಸು ಮರುಗಿತು. ಅಲ್ಲಿ ಮಡಿದವರು ಯಾರೋ? ನಾನ್ಯಾರೋ? ಆದರೂ ಅವರಿಗಾಗಿ ಜೀವ ರೋಧಿಸುತ್ತಿತ್ತು. ಹೃದಯ ಕಂಬನಿ ಮಿಡಿಯುತ್ತಿತ್ತು.
ಹಚ್ಚ ಹಸುರಿನ ಕಾನನದ ಮಧ್ಯೆ ಲೋಹದ ಹಕ್ಕಿ ಧಗಧಗನೆ ಉರಿಯುತ್ತಿತ್ತು. ಅದರಲ್ಲಿ 158 ಜೀವಗಳು ಸಜೀವ ದಹನವಾಗಿ ಸುಟ್ಟು ಕರಕಲಾದವು. ಕನಿಷ್ಟ ಪಕ್ಷ ಅವರವರ ಮನೆಯವರಿಗೂ ಮಗನ, ಮಗಳ, ತಂದೆಯ, ತಾಯಿಯ, ಅಣ್ಣ-ತಮ್ಮ, ಅಕ್ಕ-ತಂಗಿ, ಮೊಮ್ಮಗ-ಮೊಮ್ಮಗಳು, ಅಳಿಯ, ಸೊಸೆ, ಚಿಕ್ಕಪ್ಪ, ಚಿಕ್ಕಮ್ಮ..... ಹೀಗೆ ತಮ್ಮ ರಕ್ತ ಸಂಬಂಧಿ, ಬಂಧುಗಳ ಮುಖವನ್ನು ಸರಿಯಾಗಿ ನೋಡುವ ಅವಕಾಶವನ್ನೂ ಜವರಾಯ ನೀಡಿಲಿಲ್ಲ.

ಆಗ ಸರಿ ತಪ್ಪು ಯಾರದು ಎಂದು ಚರ್ಚಿಸುವ ಸಮಯವಲ್ಲ, ಅಲ್ಲಿ ಪರಿಹಾರ ಕ್ರಮಕೈಗೊಳ್ಳಬೇಕಿತ್ತು. ಜಾತಿ, ಮತಧರ್ಮವನ್ನು ಮರೆತು ಎಲ್ಲರೂ ಸೇವೆಗೆ ತಮ್ಮ ಹೆಗಲು ಜೋಡಿಸಿದ್ದನ್ನು ಮರೆಯುವಂತಿಲ್ಲ.
ಸಾವಿರಾರು ಕನಸುಗಳನ್ನು ನನಸಾಗುವ ಮೊದಲು ನಾಶ ಮಾಡಿದ  ಕೆಂಜಾರು ಕಣಿವೆ ಮಾತ್ರ ನನಗಾವುದರ ಅರಿವಿಲ್ಲ ಎಂಬಂತೆ ಮೌನವಾಗಿದೆ.
ದುರಂತದ ದೃಶ್ಯಗಳು ಮನಸ್ಸಿನಿಂದ ದೂರವಾಗಿಲ್ಲ. ಈಗಲೂ ಕಣ್ಮುಂದೆ ಬರುತ್ತವೆ. ಭಯದ ಛಾಯೆ ಕೂಡ ಅಳಿದಿಲ್ಲ ಎನ್ನುತ್ತಾರೆ ಸ್ಥಳೀಯರು. ಏನೇ ಆದರೂ  ಕೆಲವೇ ಕ್ಷಣಗಳಲ್ಲಿ 158 ಜೀವಗಳನ್ನು ಬಲಿ ತೆಗೆದುಕೊಂಡ ಈ ಕಣಿವೆ ಮಾತ್ರ ನೀರವ ಮೌನ ಹೊದ್ದುಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ