ಮೇ 25, 2011

ಕಡಲ ತಡಿಗೆ ಮತ್ತೆ ಲಗ್ಗೆ ಇಟ್ಟೆ

ಹೌದು ಮಂಗಳೂರನ್ನು ಬಿಟ್ಟು ಎಂಟು ತಿಂಗಳುಗಳೇ ಸರಿದಿದ್ದವು (ಆದರೂ ಮನ ಮಾತ್ರ ಇಲ್ಲೇ ಮನೆ ಮಾಡಿತ್ತು). ಹೊಸ ಜನ ಹೊಸ ಮುಖ ನನ್ನವರಲ್ಲದವರ ಊರಿಗೆ ನಾನು ಹೋಗಿ ಅಲ್ಲಿ ಜೀವನ ಆರಂಭಿಸಿದ್ದೆ. ಮೊದಲಿಗೆ ಹೊಸಬಳೆಂಬ ಅನುಕಂಪ ನನಗೆ ಸಿಕ್ಕಿತ್ತು. ನಂತರ ದಿನಗಳಲ್ಲಿ ಅದು ಅಧಿಕಾರವಾಗಿ ಮಾರ್ಪಾಡಾಯಿತು. ನನಗೆ ಆ ಅನುಕಂಪ ಬೇಕಿರಲಿಲ್ಲ ಬಿಡಿ. ನಾ ಬಯಸಿದ್ದು ಕೇವಲ ಮಾರ್ಗದರ್ಶನ. ಅದನ್ನು ಕೊಡುವ ವ್ಯವದಾನವಾಗಲಿ, ಆಸ್ಥೆಯಾಗಲಿ ಅಲ್ಲಿನವರಿಗಿರಲಿಲ್ಲ! ಯಾಕೆಂದರೆ ಎಲ್ಲರೂ ತಮ್ಮತಮ್ಮ ಬುಡವನ್ನು ಗಟ್ಟಿಗೊಳಿಸುವ ಕೆಲಸದಲ್ಲಿ ತೊಡಗಿದ್ದರು. ಎಲ್ಲಿ ತನ್ನ ಕೆಳಗಿನವನ ಜೊತೆ ಉತ್ತಮ ಸಂಬಂಧ ಬೆಳೆಸಿದರೆ ತನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತದೋ ಎನ್ನುವ ರೀತಿಯಲ್ಲಿ ಯೋಚನಾ ಲಹರಿ ಇದ್ದೀತು. ಏನೇ ಆದರೂ ತಮ್ಮ ಅಧಿಕಾರವನ್ನು ಚಲಾಯಿಸುವ ಅವಕಾಶವನ್ನು ಬಿಲ್ಕುಲ್ ಬಿಟ್ಟುಕೊಟ್ಟಿರಲಿಲ್ಲ. ಎಲ್ಲಿಯೂ ಸಹಜ ಜೀವನದ ಬದಲು ಯಾಂತ್ರಿಕ ಬದುಕು ತೋರುತ್ತಿತ್ತು. ಎದುರಿನಲ್ಲಿ ಸಾಗುತ್ತಿದ್ದ ನಮ್ಮದೇ ಸಂಸ್ಥೆಯ ಉದ್ಯೋಗಿಯನ್ನು ಕಂಡು ಮನಸಾರೆ ಒಂದು ಮುಗುಳ್ನಗೆ ಬೀರಬೇಕಾದರೂ ನಾಲ್ಕು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದ್ದು ಸುಳ್ಳಲ್ಲ.

ಆತ್ಮೀಯವಾಗಿ ಬೆರೆಯುವುದನ್ನೇ ಇಷ್ಟ ಪಡುವ ನಾನು, ನನಗದೇ ಮುಳುವಾಗಿತ್ತು.
ಆಗಲೇ ಯೋಚಿಸಿದ್ದೆ ನಾನು ನನ್ನಿಚ್ಛೆಯಂತೆ ಬದುಕಲು ಆಗದಿದ್ದರೆ ಇಲ್ಲಿದ್ದು ಏನು ಪ್ರಯೋಜನ?ಪ್ರತಿಯೊಂದು ಜೀವವೂ ಬಯಸುವುದು ಒಂದಿಷ್ಟು ಆತ್ಮೀಯತೆ. ನನ್ನೆದುರು ಇರುವವರೆಲ್ಲರೂ ನನ್ನ ಡೌನ್ ಮಾಡುತ್ತಿದ್ದರೆ ಏನು ಮಾಡಬಹುದು ಎಂದು ಯೋಚಿಸಿದಾಗ ನನ್ನೆದುರು ಇದ್ದದ್ದು ಇದೊಂದೇ ಆಫರ್. ಮತ್ತೆ ಕಡಲ ತಡಿಗೆ ಪಯಣಿಸುವುದು. ಗೊತ್ತಿತ್ತು ಹಾಗೇ ಬರುವುದು ಅಲ್ಲ, ಅಲ್ಲಿ ನನ್ನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು. ಅದನ್ನು ನಿಭಾಯಿಸುವ ಸಾಮರ್ಥ್ಯ ನನಗಿದೆ ಎನ್ನುವುದು ನನ್ನ ಮತ್ತು ನನ್ನ ಗೆಳೆಯರಿಬ್ಬರ ಮನಸಿನಲ್ಲಿದ್ದರೂ, ನೀರಿಗೆ ಇಳಿಯದೇ ಈಜು ಬರುತ್ತಾ ಇಲ್ಲವಾ ಎಂದು ಹೇಳುವುದು ಕಷ್ಟ. ಮೊದಲು ನೀರಿಗಿಳಿ. ಈಜುವುದು ಕಷ್ಟ ಎಣಿಸಿದರೆ ತರಬೇತಿ ಪಡೆ ಸಾಧ್ಯವಾಗದು ಎನ್ನುವ ವಿಚಾರ ಇಲ್ಲ. ಎಲ್ಲವೂ ಸಾಧ್ಯ. ಅದನ್ನ ಸಾಧ್ಯ ಮಾಡಿಸುವ ಧೈರ್ಯ, ಸಾಮರ್ಥ್ಯ ನಿನ್ನಲ್ಲಿದೆ ಎಂದು ಫುಲ್ ಸಪೋರ್ಟ್ ಮಾಡಿದರು. ನನ್ನ ಜೀವದ ಗೆಳೆಯರಿಬ್ಬರು ಜೊತೆಯಲ್ಲಿದ್ದಾಗ ನನಗೇತಕೆ ಭಯ ಮುನ್ನುಗ್ಗಿದೆ. ಮುಂದೆ ಸಾಗುತ್ತಿದ್ದೇನೆ....
ಮತ್ತೆ ಹೊಸದನ್ನು ಅರಸಿ ಬಂದೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಆತ್ಮೀಯರ ಸನಿಹದಲ್ಲಿರುವುದೇ ನನ್ನಾಸೆಯಾಗಿತ್ತು. ಅಲ್ಲಿ ಯಾರೂ ನನ್ನವರು ಎಂದು ಅನ್ನಿಸಲೇ ಇಲ್ಲ ಎಂದೇನಿಲ್ಲ. ಅವರ ಜೊತೆ ಹೊಂದಿಕೊಳ್ಳಲು ನನಗಾಗಲಿಲ್ಲ ಅಷ್ಟೆ. ಇಲ್ಲಿ ನನ್ನವರೇ ಜೊತೆಗಿದ್ದಾರೆ ನನ್ನ ಶಕ್ತಿ, ಸಾಮರ್ಥ್ಯವಾಗಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ