ಮೇ 27, 2011

ನನ್ನ ಬಾಳಿನ ಚೈತನ್ಯದ ಚಿಲುಮೆ

ಪುಟ್ಟ ಗೆಳತಿ,
ನೀನು ನನ್ನ ಎದುರು ಕುಳಿತರೆ ನನಗೆ ಬೇರೇನು ಬೇಕು ಹೇಳು? ನಾನು ಮೌನಕ್ಕೆ ಶರಣಾಗಿ ನಿನ್ನ ಈ ಮೊಗವನ್ನೇ ನೋಡುತ್ತಾ ಕುತ್ಕೊಳ್ತೀನಿ. ಏನು ಮಾತಾಡೋಕು ಬೇಡ ಅನಿಸುತ್ತದೆ. ಆದರೆ ನೀನು ಮಾತಾನಾಡಿದರೆ ಸುಮ್ಮಗೆ ಕುಳಿತು ಕೇಳ್ತೀನಿ. ನನಗದೇ ಇಷ್ಟ. ನಿನ್ನ ಧ್ವನಿಯಲ್ಲಿ ಏನೋ ಶಕ್ತಿ ಇದೆ. ಪದೇ ಪದೇ ಹೇಳ್ತೀನಿ ಅಂತ ನನಗೆ ಬೈಕೋಬೇಡ. ಬೈದರೂ ಪರವಾಗಿಲ್ಲ, ನಿನ್ನ ವಾಯ್ಸ್ ನಂಗೆ ಇಷ್ಟ.
ದಿನ ಕಳೆಯುತ್ತಿದ್ದಂತೆ ಮನದಲ್ಲಿ ಯಾಕೋ ಸ್ವಾರ್ಥ ಇಣುಕುತ್ತಿದೆ ಕಣೆ. ಮೊದ ಮೊದಲು ನೀನು ಎಲ್ಲರೊಂದಿಗೆ ಮಾತಾಡುತ್ತಿದ್ದರೆ ನನಗೇನು ಅನ್ನಿಸುತ್ತಿರಲಿಲ್ಲ. ಆದರೆ ಯಾಕೋ ನೀನು ನನಗೆ ಮಾತ್ರ ಸೀಮಿತ ಆಗಬೇಕು ಎಂಬ ಭಾವನೆ ಒಮ್ಮೊಮ್ಮೆ ಮನದೊಳಗೆ ಮೂಡುತ್ತದೆ. ನನಗೆ ಗೊತ್ತು ಕಣೇ ನನ್ನ ಮುದ್ದು, ನೀನು ಆ ರೀತಿ ಯೋಚಿಸಲ್ಲ ಅಂತ. ಫಸ್ಟ್ ನಿನ್ನಲ್ಲಿ ಸಲುಗೆ ತಗೊಳೋಕೆ ನಾನು ಹಿಂಜರಿಯುತ್ತಿದ್ದೆ. ಆದರೆ ಈಗ ಅದೆಲ್ಲವೂ ನನ್ನಿಂದ ದೂರ ಸರಿದಿದೆ. ನಾನು ಧೈರ್ಯವಾಗಿ ಯಾವ ವಿಚಾರವಾದರೂ ನಿನ್ನಲ್ಲಿ ಮಾತಾಡಬಲ್ಲೆ, ಆ ವಿಶ್ವಾಸ ನನಗಿದೆ.

ನಿನಗೆ ನನ್ನ ಮೇಲೆ ಎಷ್ಟು ವಿಶ್ವಾಸ ಇದೆ ಅಂತ ಮೊನ್ನೆ ಪ್ರೂವ್ ಆಯ್ತು ಕಣೆ. ಹ್ಞಾಂ ಅಲ್ಲಿ ತನಕ ಡೌಟ್ ಇತ್ತು ಅಂತಲ್ಲ. ಆದರೆ ಅಷ್ಟೊಂದು ನನ್ನ ಮೇಲೆ ನಂಬಿಕೆ ಇದೆ, ನಿನ್ನ ನಂಬಿಕೆಗೆ ನಾನು ಅರ್ಹ ಅನ್ನೋ ಭಾವನೆ ನಿನ್ನಲ್ಲಿದೆ ಅಂತ ತಿಳಿದಾಗ ನನ್ನಷ್ಟು ಪರಮ ಸುಖಿ ಈ ಜಗತ್ತಿನಲ್ಲಿ ಬೇರಾರು ಇಲ್ಲ.
ಬೆಂಗಳೂರು ದೂರ ಆಗ್ತಿದ್ದ ಹಾಗೆ ಹೃದಯ ಭಾರ ಆಗ್ತಿದೆ. ಬೆಂಗಳೂರಷ್ಟೇ ದೂರ, ನೀನು ಸ್ವಲ್ಪ ದೂರ ಆಗೋದು ನೆನೆಯೋಕೆ ಆಗಲ್ಲ. ಹೀಗೆ, ಹೀಗೇ ಇರ್ತಿ ಅಲ್ಲಾ? ಕ್ಷಮಿಸು ಈ ಮಾತು ಬರಬಾರದು. ಸವ್ಯಾ ನಿನ್ನ ಆತ್ಮೀಯ ಗೆಳೆಯ ನಾನು ಅನ್ನೋದು ನನಗೆ ಅತ್ಯಂತ ಖುಷಿಯ ಸಂಗತಿ. ಈ ನನ್ನ ಆನಂದವನ್ನ, ಭಾವನೆಗಳನ್ನ ವ್ಯಕ್ತಪಡಿಸೋಕೆ ನನ್ನಲ್ಲಿ ಪದಗಳಿಲ್ಲ ಕಣೇ.... ರಿಯಲೀ ಹಿಯರ್ ಐ ಮಿಸ್ ಯೂ ಡಿಯರ್. ಯಾಕೆ ಸವ್ಯಾ ಅಂದರೆ ಅರ್ಥ ಆಗಿಲ್ವಾ? ಸ್ಸಾರಿ ನಿಂಗೆಲ್ಲಿ ಅರ್ಥ ಆಗ್ಬೇಕು?ಹೇಳ್ತೀನಿ ಕೇಳು, ಸವ್ಯಾ ಅಂದರೆ ಸವಿ ತಂದೋಳು. ಈ ಹೆಸರು ಹೇಳಿದರೆ ಎರಡೂ ಹೆಸರು ಇದ್ದ ಹಾಗೆ, ಈ ಹೆಸರನ್ನು  ನಾನು ಮಾತ್ರ ಕರಿಬೋದು ಅಲ್ವಾ? ನೋಡು ಮತ್ತೆ ಸ್ವಾರ್ಥ!
ಇವಳು ಯಾರೂ ಬಲ್ಲೆ ಏನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ ಬಂದು ನನ್ನ ಸೆಳೆದಳು?
ದಿನ ಬೆಳಗಾದರೆ ಸಾಕು ಅದೇ ಆಫೀಸು, ಅದೇ ಚೆಯರು, ಅದೇ ಟೇಬಲ್ಲು ಅದೇ ಫೈಲು, ದಿನಕ್ಕೆ ರಾಶಿ ರಾಶಿ ಸಮಸ್ಯೆಗಳು. ಇದನ್ನೆಲ್ಲಾ ಬಗೆಹರಿಸಿ ಸಮಾಧಾನ ಮಾಡುವ ಹೊತ್ತಿಗೆ ತಲೆ ಕೆಟ್ಟು ಹೋಗುತ್ತಿತ್ತು. ಆದರೆ ಕಳೆದೆರಡು ತಿಂಗಳಿಂದ ಯಾವ ಬೇಸರವೂ ಇಲ್ಲ ಯಾಕಂದರೆ ನನ್ನಲ್ಲಿ ಚೈತನ್ಯದ ಚಿಲುಮೆ ಇದೆ. ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿಸುತ್ತಾಳೆ ನನ್ನ ಈ ಗೆಳತಿ.
ನಾಳೆ ನೀನು ನನ್ನ ಜೊತೆ ಇರಬೇಕಿತ್ತು ಕಣೆ. ಎಲ್ಲವೂ ಸರಿಯಾಗಿಯೇ ಇದೆ. ಯಾವ ಕೊರತೆಯೂ ಇಲ್ಲ, ಆದರೆ ನನ್ನ ಒಂದೇ ಒಂದು ಬೇಸರ ಎಂದರೆ ನನ್ನ ಸ್ಫೂರ್ತಿಯನ್ನು ಇಮ್ಮಡಿಗೊಳಿಸುವ ನೀನು ನನ್ನ ಜೊತೆಗಿಲ್ಲ! ನೀನು ನನ್ನೊಂದಿಗಿದ್ದಿಯಾ, ಎಲ್ಲಾ ಸರಿ ಆದರೆ.... ಪರವಾಗಿಲ್ಲ ನಿನ್ನ ಸವಿ ನೆನಪು ನನ್ನಲ್ಲಿದೆ. ಅದೇ ಸಾಕು ಆದಷ್ಟು ಬೇಗ ಮತ್ತೊಮ್ಮೆ ನಿನ್ನ ನನ್ನ ಕಣ್ಣಲ್ಲಿ ತುಂಬಿಸಿಕೊಳ್ಳುತ್ತೇನೆ ಕಣೇ. ಮುಂದಿನ ತಿಂಗಳು ಬಂದು ನಿನ್ನ ತೆಕ್ಕೆಯೊಳಗೆ ಬಂಧಿಯಾಗುತ್ತೇನೆ.
ಇಂತೀ
ಪ್ರಿಯ ಗೆಳೆಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ